ಬಡವರನ್ನು ಬೀದಿ ಪಾಲು ಮಾಡಿದರೆ ಹೋರಾಟ: ಪಾಲಿಕೆಗೆ ರಾಕೇಶ್ ಮಲ್ಲಿ ಎಚ್ಚರಿಕೆ

Update: 2021-01-24 12:36 GMT

ಸುರತ್ಕಲ್, ಜ.24: ಕಳೆದ 32 ವರ್ಷಗಳಿಂದ ರವಿವಾರ ಸಂತೆ ವ್ಯಾಪಾರ ಮಾಡುತಿದ್ದ ಬಡವರನ್ನು ಯಾವುದೇ ಕಾರಣಕ್ಕೂ ಬೀದಿ ಪಾಲು ಮಾಡಬಾರದು, ಮತ್ತೆ ರವಿವಾರ ಸಂತೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪಾಲಿಕೆ ವಿರುದ್ದ ನಿರಂತರ ಹೋರಾಟ ಅನಿವಾರ್ಯ ಎಂದು ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಹೇಳಿದರು.

ಸುರತ್ಕಲ್‌ನ 'ರವಿವಾರದ ಸಂತೆ' ವ್ಯಾಪಾರವನ್ನು ಬಂದ್ ಮಾಡಿರುವುದನ್ನು ವಿರೋಧಿಸಿ ರವಿವಾರ ಇಂಟಕ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು  ಮಾತನಾಡಿದರು. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಿ ರವಿವಾರ ಸಂತೆಗೆ ಅನುಮತಿ ನೀಡಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗುವುದು. ಅವಕಾಶ ನೀಡದೆ ಇದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.

ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮಾತನಾಡಿ, ಸುಪ್ರೀಂ ಕೋರ್ಟ್ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದೆಯಲ್ಲದೆ ಇದೀಗ ಆರ್ಥಿಕ ಸಹಾಯವನ್ನೂ ನೀಡಲಾಗುತ್ತಿದೆ. ಆದರೆ ಸುರತ್ಕಲ್‌ನಲ್ಲಿ ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುತ್ತಿದೆ. ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ಮಾಡುವ ಬಡವರ ವಿರುದ್ದ ಯಾರಿಗೆ ದ್ವೇಷವಿದೆ ಎಂಬುದು ಅರ್ಥವಾಗುತ್ತಿಲ್ಲ. ಸ್ಟೇಟ್‌ಬ್ಯಾಂಕ್‌ನಲ್ಲಿ ನಿತ್ಯವೂ ವ್ಯಾಪಾರವಿದೆ. ಬಿಕರ್ನಕಟ್ಟೆಯಲ್ಲೂ ಸಂತೆಯಿದೆ. ಉತ್ತರ ಕರ್ನಾಟಕದಲ್ಲಿ ಸಾವಿರಾರು ಕುಟುಂಬಗಳು ಬದುಕಿನ ಹಾದಿ ಕಂಡುಕೊಂಡಿದೆ. ತಕ್ಷಣ ಪಾಲಿಕೆ ರವಿವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಮಾಜಿ ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಇಂಟಕ್ ಮುಖಂಡರಾದ ಅಬೂಬಕರ್ ಕೃಷ್ಣಾಪುರ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ, ರಿಕ್ಷಾ ಯೂನಿಯನ್‌ನ ಭಗವಾನ್, ಜಯಕರ್ನಾಟಕ ಸಂಘಟನೆಯ ವೈ. ರಾಘವೇಂದ್ರ ರಾವ್, ವಿಜಯ್ ಸುವರ್ಣ, ಮೋಹನ್ ಕರ್ಕೇರ, ವಿನೋದ್ ರಾಜ್, ಪುನೀತ್ ಶೆಟ್ಟಿ, ಸ್ಟೀವನ್, ಸುಕುಮಾರ್, ಹರೀಶ್, ಶಿಫಾಲ್ ರಾಜ್, ಸಂತೆ ಒಕ್ಕೂಟದ ಮುಹಮ್ಮದ್, ಬದ್ರುದ್ದೀನ್, ಮುಸ್ತಫಾ, ನಝೀರ್, ಅಸ್ಗರ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News