ಮಣ್ಣಿನ ಉತ್ಪನ್ನಗಳಿಗೆ ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ: ಡಾ.ರಾಘವೇಂದ್ರ ಶೆಟ್ಟಿ

Update: 2021-01-24 12:52 GMT

ಕುಂದಾಪುರ, ಜ.24: ರಾಜ್ಯದ ಕರಕುಶಲ ವಸ್ತುಗಳು ಮತ್ತು ಗುಡಿಕೈಗಾರಿಕೆ ಗಳಿಗೆ ಉತ್ತೇಜನ ನೀಡಿ, ಕರಕುಶಲಕರ್ಮಿಗಳಿಗೆ ಸ್ವಾವಲಂಬಿ ಬದುಕು ರೂಪಿಸಲು ಕ್ರಮಕೈಗೊಳ್ಳುವ ಜತೆಗೆ ಮಣ್ಣಿನ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆ ದೊರಕಿಸಿ ಕೊಡಲಾಗುವುದು ಎಂದು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಭರವಸೆ ನೀಡಿದ್ದಾರೆ.

ಕುಂದಾಪುರ ತಾಲ್ಲೂಕಿನ ಆಲೂರು ಗ್ರಾಮದ ಗುರುವಂದನಾ ಪಾಟರಿ ಪ್ರೊಡಕ್ಟ್ ಸಂಸ್ಥೆಗೆ ಶನಿವಾರ ಭೇಟಿ ನೀಡಿ, ಅಲ್ಲಿನ ಮಡಕೆ ತಯಾರಿಕೆ ಮತ್ತು ಮಣ್ಣಿನ ಉತ್ಪನ್ನಗಳ ಕುರಿತು ಮಾಹಿತಿ ಪಡೆದ ಬಳಿಕ ಅವರು ಮಾತನಾಡು ತ್ತಿದ್ದರು. ರಾಜಸ್ಥಾನದ ಮಡಿಕೆಗಳು ಗಟ್ಟಿಯಾಗಿರುತ್ತವೆ. ನಮ್ಮ ಭಾಗದ ಮಡಿಕೆಗಳು ಮೃದುವಾಗಿರುತ್ತವೆ. ಅಲ್ಲಿಯ ತಂತ್ರಜ್ಞಾನ ಬಳಕೆ ಮಾಡಿ ಇಲ್ಲಿಯೂ ಅದೇ ರೀತಿ ಮಡಕೆ ತಯಾರಿಸಲು ಅನುವು ಮಾಡಿಕೊಡಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಹತ್ತು ದಿನಗಳ ಕಾಲ ಕರಕುಶಲ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸುವ ಯೋಚನೆಯಿದ್ದು, ಮೇಳದಲ್ಲಿ ಬಿದಿರು, ಶಿಲ್ಪಕಲೆ ಮತ್ತು ಮಣ್ಣಿನ ಉತ್ಪನ್ನಗಳು ಪ್ರದರ್ಶನ ಏರ್ಪಡಿಸಿ ಯುವಜನರಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಸಂಸ್ಕಂತಿಯ ಭಾಗವಾಗಿರುವ ಕರಕುಶಲ ವಸ್ತುಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ಕುಂದಾಪುರದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕ ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು, ಅದರಲ್ಲಿ ಮಣ್ಣಿನ ಉತ್ಪನ್ನಗಳಿಗಾಗಿ ಪ್ರತ್ಯೇಕ ಒಂದು ಭಾಗ ನಿರ್ಮಿಸಿ, ಉತ್ಪಾದನಾ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಉಡುಪಿಯಲ್ಲಿ ಹೊಸದಾಗಿ ಪ್ರಾರಂಭಿಸಲು ತೀರ್ಮಾನಿಸಿರುವ ಮಾರುಕಟ್ಟೆಯಲ್ಲಿ ಮಣ್ಣಿನ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ರೈಲುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಮಣ್ಣಿನ ಉತ್ಪನ್ನಗಳನ್ನು ಬಳಕೆ ಮಾಡಲು ಕೇಂದ್ರ ಸರಕಾರಕ್ಕೆ ಮನವಿ ಮಾಡುವ ಮೂಲಕ ಕುಂಬಾರರಿಗೆ ಉತ್ತೇಜನ ನೀಡಲು ಕೇಂದ್ರ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದ ಅವರು, ಕೆಎಂಎಫ್, ಕರ್ನಾಟಕ ಹಾಲು ಮಹಾಮಂಡಳಿ ಜೊತೆ ಚರ್ಚಿಸಿ ಮೊಸರು ಮತ್ತು ಐಸ್‌ಕ್ರೀಂ ಉತ್ಪನ್ನಗಳಿಗೆ, ದೊಡ್ಡ ನಗರಗಳ ಹೋಟೆಲ್ ಉದ್ಯಮಗಳಿಗೆ ಮಾರುಕಟ್ಟೆ ಒದಗಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News