ದಿಲ್ಲಿ ರೈತರ ಚಳುವಳಿ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ

Update: 2021-01-24 13:33 GMT

ಭಟ್ಕಳ: ಕೇಂದ್ರದ ಕರಾಳ ಕೃಷಿ ಕಾನೂನು ವಿರೋಧಿಸಿ ಕಳೆದ ಹಲವಾರು ದಿನಗಳಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟ ಬೆಂಬಲಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ್ಯಂತ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನಕ್ಕೆ ರವಿವಾರ ಭಟ್ಕಳದ ಸಂತೆ ಮಾರುಕಟ್ಟೆಯಲ್ಲಿ ಉ.ಕ. ಜಿಲ್ಲಾಧ್ಯಕ್ಷ ಡಾ.ನಸೀಮ್ ಖಾನ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಚಳಿಯನ್ನು ಲೆಕ್ಕಿಸದೆ ಎರಡು ತಿಂಗಳಿಂದ ರೈತರು ಕೇಂದ್ರದ ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ವೆಲ್ಫೇರ್ ಪಾರ್ಟಿ ಸಂಪೂರ್ಣ ಬೆಂಬಲ ನೀಡುತ್ತಿದ್ದು, ಕೇಂದ್ರದ ಕರಾಳ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತದೆ ಎಂದರು.

ಕೇಂದ್ರ ಸರ್ಕಾರ ದೇಶದ ರೈತರ ಹಿತ ಕಾಪಾಡುವ ಬದಲು ಅವರನ್ನು ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದ ಅವರು, ರೈತರನ್ನು ಬೆಂಬಲಿಸಿ ಹಾಗೂ ಕಾನೂನು ವಿರೋಧಿಸಿ ವೆಲ್ಫೇರ್ ಪಾರ್ಟಿ ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದೆ ಎಂದರು. 

ಮುಖಂಡ ಅಬ್ದುಲ್ ಜಬ್ಬಾರ್ ಅಸದಿ ಮಾತನಾಡಿ, ರೈತರು ಕೆಂದ್ರ ಸರ್ಕಾರದ ಕರಾಳ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟವನ್ನು ನಾವು ಬೆಂಬಲಿಸುತ್ತೇವೆ. ಇದಕ್ಕಾಗಿ ಸಾರ್ವಜನಿಕರಿಂದ ಸಹಿ ಸಂಗ್ರಹ ನಡೆಸಲಾಗುತ್ತಿದ್ದು ಭಟ್ಕಳದಲ್ಲಿ ಸುಮಾರು 2000ಕ್ಕೂ ಅಧಿಕ ಸಹಿ ಸಂಗ್ರಹಿಸುವ ಗುರಿ ಹೊಂದಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಆಸಿಫ್ ಶೇಖ್, ಉಪಾಧ್ಯಕ್ಷ ಶೌಕತ್ ಖತೀಬ್, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News