​ಸ್ವಾವಲಂಬಿ ಉತ್ಪಾದನೆಗೆ ಒತ್ತು: ರಘು ಕೌಟಿಲ್ಯ

Update: 2021-01-24 14:08 GMT

ಮಂಗಳೂರು, ಜ.24: ಸೇವಾ ವಲಯ, ಸಾರಿಗೆ ವಲಯ, ಕೈಗಾರಿಕೆ ವಲಯಗಳಲ್ಲಿ ಕೈಗೊಳ್ಳುವ ಉದ್ದೇಶಗಳಿಗೆ ರಾಜ್ಯ ಸರಕಾರವು ಸಾಲ ಸೌಲಭ್ಯ ವಿತರಿಸುತ್ತಿದ್ದು, ಕೌಶಲ್ಯ ಕರ್ನಾಟಕ ಯೋಜನೆಗೆ ವ್ಯಾಪಕ ಸಿದ್ಧತೆ ಕೈಗೊಂಡಿದೆ. ವಿದೇಶಿ ವಸ್ತುಗಳ ಬದಲು ಸ್ವಾವಲಂಬಿ ಉತ್ಪಾದನೆಗೆ ಒತ್ತು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗದ ಅಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 224 ತಾಲೂಕುಗಳಿದ್ದು, ಪ್ರತಿ ತಾಲೂಕಿನಲ್ಲಿ ತಲಾ 50ರಂತೆ ವರ್ಷಪೂರ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಎಲ್ಲ ರೀತಿಯ ಗ್ರಾಮೀಣ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ನಿಗಮದ ವ್ಯಾಪ್ತಿಗೆ 206 ಜಾತಿಗಳು ಬರುತ್ತಿದ್ದು, ಯಾವುದೆಲ್ಲ ವೃತ್ತಿಗಳನ್ನು ಪುನರುಜ್ಜೀವನಗೊಳಿಸಬೇಕು ಎಂಬ ಬಗ್ಗೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ತರಬೇತು ಪೂರ್ಣಗೊಳಿಸಿದರೆ ಮಾತ್ರ ಆರ್ಥಿಕ ನೆರವು ನೀಡಲಾಗುವುದು. ಸುಮಾರು ಐದು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.

ವಿದೇಶಿ ಉತ್ಪನ್ನಗಳ ಬದಲು ದೇಶೀಯವಾಗಿ ಮರೆಯಾಗುತ್ತಿರುವ ಹಾಗೂ ಸಾಂಪ್ರದಾಯಿಕ ಉತ್ಪನ್ನ, ಕಸುಬುಗಳನ್ನು ಮತ್ತೆ ಮುಖ್ಯವಾಹಿನಿಗೆ ತರಲು ಉದ್ದೇಶಿಸಲಾಗಿದೆ. ಪ್ರಧಾನಿಯವರ ಕಲ್ಪನೆಯೂ ಗ್ರಾಮ ಭಾರತವಾಗಿದ್ದು, ಎಲ್ಲ ಸಮುದಾಯಕ್ಕೂ ಆದ್ಯತೆ ನೀಡಲಾಗುವುದು. ಕೃಷಿ, ಅರಣ್ಯ, ಸಮುದ್ರ ಉತ್ಪನ್ನ ಕೈಗಾರಿಕೆಗಳಿಗೆ ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಗುಂಪು ಕೈಗಾರಿಕೆಗಳಿಗೂ ನೆರವು ನೀಡಲಾಗುವುದು. ದ್ವಿಚಕ್ರ ವಾಹನ ಖರೀದಿಸಿ ಸ್ವಉದ್ಯೋಗ ಕೈಗೊಳ್ಳಲು ಅನುಕೂಲವಾಗಲು ನಿಗಮದಿಂದ ವಾಹನ ಖರೀದಿಗೆ 25 ಸಾವಿರ ರೂ. ಸಬ್ಸಿಡಿ ಸಾಲ ನೀಡಲಾಗುತ್ತದೆ ಎಂದರು.

ಗಂಗಾಕಲ್ಯಾಣ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಅಧಿಕಾರೇತರ ಸದಸ್ಯರ ನೇಮಕಗೊಳಿಸುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗುವುದು. ನಿಗಮದ ವ್ಯಾಪ್ತಿಯ ಎಲ್ಲ 206 ಜಾತಿಗಳಿಗೂ ತರಬೇತಿ ಹಾಗೂ ಸವಲತ್ತು ಸಿಗುವಂತಾಗಲು ಮನೆಗಳಿಗೆ ತೆರಳಿ ಫಲಾನುಭವಿ ಆಯ್ಕೆ ಹಾಗೂ ಕ್ರಿಯಾಯೋಜನೆ ತಯಾರಿಸಲು ಆದ್ಯತೆ ನೀಡಲಾಗುವುದು ಎಂದರು.

ಕರಾವಳಿ ಸೇರಿದಂತೆ ರಾಜ್ಯದ್ಯಂತ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಲಾಗುವುದು. ಕಡಲ ಉತ್ಪನ್ನಗಳಿಗೆ ಆಧುನಿಕ ಸ್ಪರ್ಶ ನೀಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ರಫ್ತಿಗೆ ಚಿಂತನೆ ನಡೆಸಲಾಗಿದೆ. ಇದರಿಂದ ದೇಶ ಇನ್ನಷ್ಟ ಆರ್ಥಿಕವಾಗಿ ಸದೃಢಗೊಳ್ಳಲಿದೆ. ಈ ಮೂಲಕ ಕನಿಷ್ಠ ದರದಲ್ಲಿ ಆರ್ಥಿಕ ಆಂದೋಲನಕ್ಕೆ ಮುಂದಾಗಲು ಸರಕಾರ ನಿರ್ಧರಿಸಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪಾಲಿಕೆ ಸದಸ್ಯರಾದ ರೂಪ ಬಂಗೇರ, ಬಿಜೆಪಿ ಮುಖಂಡರಾದ ವಿಜಯಕುಮಾರ್, ಸುರೇಂದ್ರ, ಮಹೇಶ್‌ಕುಮಾರ್, ಕಿರಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News