ಪಂಜರದಲ್ಲಿಟ್ಟರೂ ಹಕ್ಕಿಯು ಹಾಡುತ್ತದೆ: ಒಡನಾಡಿಗಳಿಗೆ ಬರೆದ ಪತ್ರದಲ್ಲಿ ಸ್ಟ್ಯಾನ್ ಸ್ವಾಮಿ

Update: 2021-01-24 15:27 GMT

ಹೊಸದಿಲ್ಲಿ,ಜ.24: ತನ್ನ ಬಂಧನದ ನೂರನೆಯ ದಿನದ ಸಂದರ್ಭದಲ್ಲಿ ಜನರು ಪ್ರದರ್ಶಿಸಿದ ಒಗ್ಗಟ್ಟಿಗಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿ ತನ್ನ ಒಡನಾಡಿಗಳಿಗೆ ಮುಂಬೈ ಸಮೀಪದ ತಲೋಜಾ ಸೆಂಟ್ರಲ್ ಜೈಲಿನಿಂದ ಪತ್ರವೊಂದನ್ನು ಬರೆದಿರುವ ಮಾನವ ಹಕ್ಕುಗಳ ಹೋರಾಟಗಾರ ಫಾ. ಸ್ಟ್ಯಾನ್ ಸ್ವಾಮಿ ಅವರು,ಕೆಲವೊಮ್ಮೆ,ವಿಶೇಷವಾಗಿ ಜೈಲಿನಲ್ಲಿ ಅನಿರ್ದಿಷ್ಟತೆಯೇ ಏಕೈಕ ನಿರ್ದಿಷ್ಟ ವಿಷಯವಾಗಿರುವಾಗ ಇಂತಹ ಒಗ್ಗಟ್ಟಿನ ಸುದ್ದಿಗಳು ತನಗೆ ಅಸೀಮ ಬಲ ಮತ್ತು ಧೈರ್ಯವನ್ನು ನೀಡುತ್ತವೆ. ಜೈಲಿನಲ್ಲಿ ದೈನಂದಿನ ಆಧಾರದಲ್ಲಿ ಬದುಕು ಸಾಗುತ್ತಿದೆ ಎಂದು ಹೇಳಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಅ.8ರಂದು ಬಂಧಿಸಲ್ಪಟ್ಟಿರುವ 83ರ ಹರೆಯದ ಸ್ವಾಮಿ ಜ.22ರಂದು ಈ ಪತ್ರವನ್ನು ತನ್ನ ಸ್ನೇಹಿತರು,ಬೆಂಬಲಿಗರು ಮತ್ತು ಎನ್‌ಜಿಒ ನ್ಯಾಷನಲ್ ಕಾನ್ಫಿಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ಸ್‌ಗೆ ಕಳುಹಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಪರಿಸರ ವಿಜ್ಞಾನ ಸಚಿವಾಲಯದ ಟ್ವಿಟರ್ ಹ್ಯಾಂಡಲ್‌ನಲ್ಲಿ ಪತ್ರದಲ್ಲಿಯ ವಿಷಯವನ್ನು ಶೇರ್ ಮಾಡಿಕೊಳ್ಳಲಾಗಿದೆ.

ಪ್ರಕರಣದಲ್ಲಿಯ 16 ಆರೋಪಿಗಳು ಒಂದೇ ಜೈಲಿನಲ್ಲಿದ್ದೇವೆಯಾದರೂ ಪರಸ್ಪರ ಭೇಟಿಯಾಗಲು ಅವಕಾಶವನ್ನು ನೀಡುತ್ತಿಲ್ಲ ಎಂದಿರುವ ಸ್ವಾಮಿ,ಆದರೆ ನಾವೀಗಲೂ ವೃಂದ ಗೀತೆಯನ್ನು ಹಾಡುತ್ತೇವೆ. ಹಕ್ಕಿಯನ್ನು ಪಂಜರದಲ್ಲಿಟ್ಟರೂ ಅದು ಹಾಡುತ್ತದೆ ಎಂದು ಹೇಳಿದ್ದಾರೆ.

ಕಳೆದ ನವಂಬರ್‌ನಲ್ಲಿಯೂ ಸ್ವಾಮಿ ಜೈಲಿನಲ್ಲಿಯ ಜೀವನವನ್ನು ಬಣ್ಣಿಸಿ ಪತ್ರವೊಂದನ್ನು ಬರೆದಿದ್ದು,ಬಂಧನದಲ್ಲಿರುವ ಇತರ ಕಾರ್ಯಕರ್ತರಾದ ವರವರ ರಾವ್,ವೆರ್ನನ್ ಗೊನ್ಸಾಲ್ವಿಸ್ ಮತ್ತು ಅರುಣ ಫೆರೇರಾ ಅವರನ್ನು ಭೇಟಿಯಾಗಲು ತನಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದರು.

ನಿಷೇಧಿತ ಸಿಪಿಐ (ಮಾವೋವಾದಿ) ಸದಸ್ಯರಾಗಿದ್ದಾರೆ ಮತ್ತು 2018ರಲ್ಲಿ ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಜಾತಿ ಹಿಂಸಾಚಾರವನ್ನು ಪ್ರಚೋದಿಸಿದ್ದ ಒಳಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಲ್ಲಿ ಎನ್‌ಐಎ ಸ್ವಾಮಿಯವರನ್ನು ಬಂಧಿಸಿದ್ದು, ಅ.9ರಿಂದಲೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News