ಸಿಬಿಎಸ್‌ಇ ಸಂಯೋಜನೆ ವ್ಯವಸ್ಥೆಯ ಪುನರ್‌ರಚನೆ

Update: 2021-01-24 14:42 GMT

ಹೊಸದಿಲ್ಲಿ,ಜ.24: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ)ಯು ಶಾಲೆಗಳಿಗಾಗಿ ತನ್ನ ಸಂಯೋಜನೆ ವ್ಯವಸ್ಥೆಯನ್ನು ಪುನರ್‌ರೂಪಿಸುತ್ತಿದ್ದು,ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ದತ್ತಾಂಶ ವಿಶ್ಲೇಷಣೆಗಳ ಆಧಾರಿತವನ್ನಾಗಿ ಮಾಡಲಿದೆ.

ಮಾ.1ರಿಂದ ಜಾರಿಗೆ ಬರಲಿರುವ ನೂತನ ಸಂಯೋಜನೆ ವ್ಯವಸ್ಥೆಯು ಹೊಸ ರಾಷ್ಟ್ರಿಯ ಶಿಕ್ಷಣ ನೀತಿಯಲ್ಲಿ ವ್ಯವಸ್ಥಿತ ಸುಧಾರಣೆಗಳಿಗಾಗಿ ಮಾಡಲಾಗಿರುವ ಶಿಫಾರಸುಗಳ ಮೇರೆ ಪುನರ್‌ರೂಪಿತಗೊಂಡಿರುತ್ತದೆ ಎಂದು ಸಿಬಿಎಸ್‌ಇ ಕಾರ್ಯದರ್ಶಿ ಅನುರಾಗ್ ತ್ರಿಪಾಠಿ ಅವರು ಸುದ್ದಿಗಾರರಿಗೆ ತಿಳಿಸಿದರು.

 ಸಿಬಿಎಸ್‌ಇ ಪುನರ್‌ರೂಪಿತ ವ್ಯವಸ್ಥೆಯ ಬಗ್ಗೆ ಶೀಘ್ರವೇ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಅವರು ಹೇಳಿದರು.

ಪುನರ್‌ರೂಪಿತ ವ್ಯವಸ್ಥೆಯಡಿ ಸಿಬಿಎಸ್‌ಇ ಸಂಯೋಜನೆಗಾಗಿ ಶಾಲೆಗಳು ಅರ್ಜಿಗಳನ್ನು ಸಲ್ಲಿಸಲು ಗಡುವುಗಳನ್ನೂ ಮಂಡಳಿಯು ಪರಿಷ್ಕರಿಸಿದೆ. ಪ್ರತಿವರ್ಷ ಮಾ.1ರಿಂದ 31,ಜೂ.1ರಿಂದ 30 ಮತ್ತು ಸೆ.1ರಿಂದ 30ರವರೆಗೆ ಸಿಬಿಎಸ್‌ಇ ಸಂಯೋಜನೆಯನ್ನು ಮತ್ತು ಹಾಲಿ ಸಂಯೋಜನೆಯ ಉನ್ನತೀಕರಣವನ್ನು ಕೋರಿ ಶಾಲೆಗಳು ಅರ್ಜಿಗಳನ್ನು ಸಲ್ಲಿಸಬಹುದು. ಸಂಯೋಜನೆಯ ವಿಸ್ತರಣೆಗಾಗಿ ಅರ್ಜಿಗಳನ್ನು ಪ್ರತಿವರ್ಷ ಮಾ.1ರಿಂದ ಮೇ 31ರವರೆಗೆ ಸ್ವೀಕರಿಸಲಾಗುವುದು ಎಂದೂ ತ್ರಿಪಾಠಿ ತಿಳಿಸಿದರು.

 ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂಯೋಜನೆಯ ಉನ್ನತೀಕರಣಕ್ಕಾಗಿ ವರ್ಚುವಲ್ ಪರಿಶೀಲನೆ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ವ್ಯವಸ್ಥೆಗೆ ಸಂಬಂಧಿಸಿದಂತೆ ವಿಚಾರಣೆಗಳಿಗೆ ಉತ್ತರಿಸಲು,ಶಾಲೆಗಳು ಮತ್ತು ಪರಿಶೀಲನಾ ಸಮಿತಿ ಸಮಸ್ಯೆಗಳನ್ನು ಪರಿಹರಿಸಲು ಸೌಲಭ್ಯ ಕೇಂದ್ರವೊಂದನ್ನೂ ಸಿಬಿಎಸ್‌ಇ ಸ್ಥಾಪಿಸುತ್ತಿದೆ.

ದೇಶ ವಿದೇಶಗಳಲ್ಲಿ 24,930 ಶಾಲೆಗಳು ಸಿಬಿಎಸ್‌ಇ ಜೊತೆಗೆ ಸಂಯೋಜಿತಗೊಂಡಿದ್ದು,10 ಲಕ್ಷ ಶಿಕ್ಷಕರು ಮತ್ತು ಎರಡೂ ಕೋಟಿಗೂ ಅಧಿಕ ವಿದ್ಯಾರ್ಥಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News