ಪ್ರೋತ್ಸಾಹ ಸಿಕ್ಕಿದರೂ ಕನ್ನಡ ಶಾಲೆಗಳು ಉಳಿಯುತ್ತಿಲ್ಲ: ಬಾಬು ಶಿವ ಪೂಜಾರಿ

Update: 2021-01-24 15:11 GMT

ಬ್ರಹ್ಮಾವರ, ಜ.24: ಕಳೆದ 10 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 25 ಸಾವಿರ ಸರಕಾರಿ ಮತ್ತು ಅನುದಾನಿತ ಕನ್ನಡ ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಬ್ರಿಟೀಷ್ ಮತ್ತು ರಾಜ ಮಹಾರಾಜರ ಕಾಲದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಈಗ ದೊರೆಯುವಷ್ಟು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ ಈಗ ಎಲ್ಲ ರೀತಿಯ ಪ್ರೋತ್ಸಾಹ ಸಿಕ್ಕಿದರೂ ಕನ್ನಡ ಶಾಲೆಗಳು ಮುಚ್ಚುಗಡೆ ಕಾಣುತ್ತಿರುವುದು ವಿಪರ್ಯಾಸ ಎಂದು ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಬ್ರಹ್ಮಾವರ ತಾಲೂಕು ಘಟಕದ ಸಾರಥ್ಯದಲ್ಲಿ ಯಡ್ತಾಡಿ ಸಾಬ್ರಕಟ್ಟೆ ಶ್ರೀವಿನಾಯಕ ಯುವಕ ಮಂಡಲದ ಸಹಕಾರದಲ್ಲಿ ಯಡ್ತಾಡಿ ಗ್ರಾಮದ ಸಾಬರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಬ್ರಹ್ಮಾವರ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಆಂಗ್ಲ ಭಾಷೆಯ ಒಲವಿನಿಂದ ಕನ್ನಡ ಭಾಷೆ ಇಂದು ಎರಡನೇ ದರ್ಜೆಯ ಶಿಕ್ಷಣ ಮಾಧ್ಯಮ ನಮ್ಮ ಮುಂದೆ ಉಳಿದುಕೊಂಡಿದೆ. ಇದರ ಪರಿಣಾಮ ಕನ್ನಡ ಶಿಕ್ಷಣ ಕೀಳರಿಮೆಗೆ ಒಳಗಾಗಿದೆ. ಮೂಲ ಸೌಕರ್ಯದ ಕೊರತೆಯು ಕನ್ನಡ ಶಿಕ್ಷಣ ಸಂಸ್ಥೆಗಳನ್ನು ಬಡವಾಗಿಸಿದೆ. ಆಧುನಿಕ ತಂತ್ರಜ್ಞಾನದ ಬಳಕೆಗೆ ತೆರೆದು ಕೊಳ್ಳದೆ ಹೋಗಿರುವುದು ಕೂಡ ಕನ್ನಡ ಭಾಷೆಯ ಹಿನ್ನಡೆಗೆ ಕಾರಣವಾಗಿದೆ ಎಂದು ಅವರು ಖೇಧ ವ್ಯಕ್ತಪಡಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕ ಇಬ್ರಾಹಿಂ ಸಾಹೇಬ್ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಿಲ್ಲ. ಶಿಕ್ಷಣ ಇಲಾಖೆಗೆ ನೀಡುವ ರೀತಿಯಲ್ಲಿ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಸರಕಾರ ಒದಗಿಸಬೇಕು.ಸಾಹಿತ್ಯದಲ್ಲಿ ಸತ್ಯ, ತತ್ವ, ಸೌಂದರ್ಯ ಅಡಗಿದೆ. ಸಾಹಿತ್ಯದ ಚಿಂತನೆಯು ವ್ಯಕ್ತಿತ್ವನ್ನು ಉನ್ನತಗೊಳಿಸುತ್ತದೆ ಎಂದರು.

ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಗಡಿನಾಡಿನಲ್ಲಿ ಕನ್ನಡ ಭಾಷೆ ಮತ್ತು ಭಾಷಿಗರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೂ ಕನ್ನಡ ಕಟ್ಟುವ ಕೆಲಸವನ್ನು ಕನ್ನಡಿಗರು ನಿರಂತರವಾಗಿ ಮಾಡುತ್ತಿದ್ದಾರೆ. ಸರಕಾರ ಕೂಡ ಕನ್ನಡ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಈ ಬಾರಿಯ ಗಣ ರಾಜ್ಯೋತ್ಸವದ ಸಂದರ್ಭದಲ್ಲಿಯೂ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಕೆದ್ಲಾಯ ಪ್ರಸಕ್ತ ಸಮ್ಮೇಳ ನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ವೇದಿಕೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಪ್ರೇಮಾ ಬಾಬು ಶಿವ ಪೂಜಾರಿ, ಮಹಾತ್ಮಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ನಾಯ್ಕೌ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ, ಕೋಶಾಧ್ಯಕ್ಷ ವಲೇರಿಯನ್ನ ಮಿನೇಝಸ್, ಬ್ರಹ್ಮಾವರ ಬಾರ್ಕೂರು ವಲಯ ಅಧ್ಯಕ್ಷ ಅಶೋಕ್ ಭಟ್, ವಿನಾಯಕ ಯುವಕ ಮಂಡಲದ ರತ್ನಾಕರ್ ಪೂಜಾರಿ ವೊದಲಾದವರು ಉಪಸ್ಥಿತರಿದ್ದರು,

ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ಸೂರಾಲು ನಾರಾಯಣ ಮಡಿ ಸ್ವಾಗತಿಸಿದರು. ಸಾಂಸ್ಕೃತಿಕ ಚಿಂತಕ ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಘಟಕದ ಕಾರ್ಯರ್ಶಿ ಮೋಹನ್ ಉಡುಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News