ಉಜಿರೆ: ಬಿಜೆಪಿ ಅಲ್ಪಸಂಖ್ಯಾತ ಮುಖಂಡನ ಹೊಟೇಲ್‌ಗೆ ನುಗ್ಗಿ ದಾಂಧಲೆ; ಆರು ಮಂದಿ ಆರೋಪಿಗಳ ಬಂಧನ

Update: 2021-01-24 16:27 GMT

ಬೆಳ್ತಂಗಡಿ, ಜ.24: ಉಜಿರೆಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡನ ಎಂಪೈರ್ ಹೊಟೇಲಿಗೆ ನುಗ್ಗಿ ಅಲ್ಲಿನ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದಾರೆ. ಉಜಿರೆ ನಿವಾಸಿಗಳಾದ ಅಜಿತ್ ಕುಮಾರ್, ಅರುಣ್ ಕುಮಾರ್, ನಿತೀಶ್, ಆಶಿಶ್ ಕುಮಾರ್, ಪರಮೇಶ್ವರ ಹಾಗೂ ನವೀನ್ ಬಂಧಿತ ಆರೋಪಿಗಳು.

ಶನಿವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಉಜಿರೆಯ ಎಂಪೈರ್ ಹೊಟೇಲಿನಲ್ಲಿ ಕೆಲಸ ಮಾಡುತ್ತಿರುವ ಮುಹಮ್ಮದ್ ಅಲ್ತಾಫ್ ಎಂಬವರು ಪಾರ್ಸೆಲ್ ನೀಡಿ ವಾಪಸ್ ಬರುತ್ತಿರುವುದನ್ನು ಕಾದು ಕುಳಿತಿದ್ದ ತಂಡವೊಂದು ಹಲ್ಲೆ ನಡೆಸಿದೆ. ಅವರು ಹಲ್ಲೆಕೋರರಿಂದ ತಪ್ಪಿಸಿಕೊಂಡು ಹೊಟೇಲ್‌ಗೆ ಬಂದಿದ್ದಾರೆ. ಈ ವೇಳೆ ತಂಡ ಅಲ್ತಾಫ್‌ರನ್ನು ಬೆನ್ನಟ್ಟಿಕೊಂಡು ಬಂದು ಹೊಟೇಲ್‌ಗೆ ನುಗ್ಗಿ ಅಲ್ತಾಫ್ ಹಾಗೂ ಸ್ಥಳದಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.

ವಾರದ ಹಿಂದೆ ಹೊಟೇಲ್‌ಗೆ ಬಂದಿದ್ದ ಈ ತಂಡ ಹೋಟೆಲ್ ಕೆಲಸಗಾರರೊಂದಿಗೆ ಗಲಾಟೆ ಮಾಡಿದ್ದರು ಎನ್ನಲಾಗಿದ್ದು ಇದರ ಮುಂದುವರಿದ ಭಾಗವಾಗಿ ಈ ಹಲ್ಲೆ ನಡೆದಿದೆ ಎನ್ನಲಾಗಿದೆ.

ಇದೀಗ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಸುಮಾರು ಹದಿನೈದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಬಗ್ಗೆ ಸಿಸಿಟಿವಿ ಕ್ಯಾಮರಾಗಳ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News