​ಬಿಜೆಪಿ ಮುಖಂಡ, ಕಾರ್ಯಕರ್ತರಿಗೆ ಈ ಗ್ರಾಮಕ್ಕೆ ನಿಷೇಧ: ಕಾರಣ ಏನು ಗೊತ್ತೇ?

Update: 2021-01-25 03:57 GMT

ಡೆಹ್ರಾಡೂನ್, ಜ.25: ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ಮುಂದುವರಿದಿರುವ ನಡುವೆಯೇ, ಬಿಜೆಪಿ ಅಧಿಕಾರದಲ್ಲಿರುವ ಉತ್ತರಾಖಂಡದ ಪುಟ್ಟ ಗ್ರಾಮವೊಂದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ನಿಷೇಧ ಹೇರುವ ಮೂಲಕ ಸುದ್ದಿ ಮಾಡಿದೆ.

ಬಿಜೆಪಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ಬಿಜೆಪಿ ಮುಖಂಡರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ ಎನ್ನುವುದು ಗ್ರಾಮದ ಮುಖಂಡರ ಸಮರ್ಥನೆ. ಉಧಾಂಸಿಂಗ್ ನಗರ ಜಿಲ್ಲೆಯ ಮಲ್ಪುರಿ ಎಂಬ ಗ್ರಾಮದಲ್ಲಿ "ರೈತ ವಿರೋಧಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ" ಎಚ್ಚರಿಕೆ ನೀಡುವ ಪೋಸ್ಟರ್, ಬ್ಯಾನರ್ ಹಾಗೂ ಹೋರ್ಡಿಂಗ್‌ಗಳು ರಾರಾಜಿಸುತ್ತಿವೆ. ಯಾರಾದರೂ ಗ್ರಾಮದ ಒಳಕ್ಕೆ ಬರುವ ಸಾಹಸಕ್ಕೆ ಕೈ ಹಾಕಿದರೆ ಅವರ "ಭದ್ರತೆ" ಗೆ ಯಾರೂ ಹೊಣೆಗಾರರಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

"ಈ ಚಳವಳಿಯಲ್ಲಿ ಈಗಾಗಲೇ 70 ಮಂದಿ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಇನ್ನೂ ದಾರ್ಷ್ಟ್ಯ ನೀತಿ ಪ್ರದರ್ಶಿಸುತ್ತಿದೆ. ಬಿಜೆಪಿಯ ಯಾರನ್ನೂ ನಮ್ಮ ಗ್ರಾಮದ ಒಳಕ್ಕೆ ನಾವು ಬಿಡುವುದಿಲ್ಲ. ನಮ್ಮನ್ನು ಅವರು ಗಣನೆಗೆ ತೆಗೆದುಕೊಳ್ಳದಿದ್ದರೆ ನಾವೂ ಆ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ" ಎಂದು ಮಾಜಿ ಗ್ರಾಮ ಪ್ರಧಾನ ಸುಬಾ ಸಿಂಗ್ ಹೇಳುತ್ತಾರೆ.

"ಜನರಲ್ಲಿ ಸಿಟ್ಟು ಇನ್ನೂ ಇದೆ. ಆ ಪಕ್ಷದ ಸದಸ್ಯರು ಅಥವಾ ಮುಖಂಡರು ಗ್ರಾಮಕ್ಕೆ ಬಂದರೆ ಅನಿವಾರ್ಯವಾಗಿ ಸಿಟ್ಟಿಗೆ ಗುರಿಯಾಬೇಕಾಗುತ್ತದೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ಕೃಷಿಕರಿಗೆ ಒಳ್ಳೆಯದಲ್ಲದ ಕೃಷಿ ಕಾನೂನನ್ನು ವಾಪಸ್ ಪಡೆಯುವುದು" ಎಂದು ಗ್ರಾಮದ ಮತ್ತೊಬ್ಬ ಮುಖಂಡ ಪರಮಜೀತ್ ಸಿಂಗ್ ಹೇಳಿದ್ದಾರೆ.

ದಿಲ್ಲಿ-ಎನ್‌ಸಿಆರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈ ಜಿಲ್ಲೆಯ 20 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ. ಗಣರಾಜ್ಯೋತ್ಸವ ದಿನದ ಟ್ರ್ಯಾಕ್ಟರ್ ಪರೇಡ್‌ನಲ್ಲಿ ಭಾಗವಹಿಸಲು ಜಿಲ್ಲೆಯ 3 ಸಾವಿರಕ್ಕೂ ಹೆಚ್ಚು ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಈಗಾಗಲೇ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News