ಟಿಆರ್ಪಿ ತಿರುಚಲು ಅರ್ನಬ್ 12,000 ಡಾಲರ್, ರೂ 40 ಲಕ್ಷ ನೀಡಿದ್ದರು: ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಹೇಳಿಕೆ

Update: 2021-01-25 06:08 GMT

ಮುಂಬೈ,ಜ.25: ಟಿಆರ್‌ʼಪಿ ತಿರುಚಿ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಂದ  ಎರಡು ಕುಟುಂಬ ಪ್ರವಾಸಗಳಿಗಾಗಿ 12,000 ಅಮೆರಿಕನ್ ಡಾಲರ್ ಹಾಗೂ ಮೂರು ವರ್ಷಗಳಲ್ಲಿ  ಒಟ್ಟು ರೂ 40 ಲಕ್ಷ ಪಡೆದಿದ್ದಾಗಿ ಟಿಆರ್‍ಪಿ ಹಗರಣದಲ್ಲಿ ಜೈಲು ಪಾಲಾಗಿರುವ  ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೊ ದಾಸಗುಪ್ತಾ ಅವರು ಹಸ್ತಪ್ರತಿಯಲ್ಲಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ಈ ಪ್ರಕರಣ ಸಂಬಂಧ ಮುಂಬೈ ಪೊಲೀಸರು  ಸಲ್ಲಿಸಿರುವ ಪೂರಕ ಚಾರ್ಜ್ ಶೀಟ್‍ನಲ್ಲಿ ಹೇಳಲಾಗಿದೆ ಎಂದು indianexpress.com ವರದಿ ಮಾಡಿದೆ.

ಜನವರಿ 11ರಂದು ಮುಂಬೈ ಪೊಲೀಸರು ಸಲ್ಲಿಸಿದ್ದ ಈ 3,600 ಪುಟಗಳ ಪೂರಕ ಚಾರ್ಜ್ ಶೀಟ್‍ನಲ್ಲಿ ಬಾರ್ಕ್ ಫಾರೆನ್ಸಿಕ್ ಅಡಿಟ್ ವರದಿ, ದಾಸಗುಪ್ತಾ ಹಾಗೂ  ಗೋಸ್ವಾಮಿ ನಡುವೆ ನಡೆದಿದೆಯೆನ್ನಲಾದ ವಾಟ್ಸ್ಯಾಪ್ ಚಾಟ್ ವಿನಿಮಯ, ಬಾರ್ಕ್ ಮಾಜಿ ಉದ್ಯೋಗಿಗಳು ಹಾಗೂ ಕೇಬಲ್ ಆಪರೇಟರುಗಳ ಸಹಿತ 59 ಮಂದಿಯ ಹೇಳಿಕೆಗಳಿವೆ.

ಪಾರ್ಥೊ ದಾಸಗುಪ್ತಾ ಅವರ ಹೇಳಿಕೆಯನ್ನು ಅಪರಾಧ ಗುಪ್ತಚರ ಘಟಕದ ಕಚೇರಿಯಲ್ಲಿ ಎರಡು ಸಾಕ್ಷಿಗಳ ಸಮ್ಮುಖದಲ್ಲಿ ಡಿಸೆಂಬರ್ 27, 2020ರಂದು ದಾಖಲಿಸಲಾಗಿತ್ತೆಂದು ಹೇಳಲಾಗಿದೆ.

"ರಿಪಬ್ಲಿಕ್ ಟಿವಿಗೆ ನಂ. 1 ರೇಟಿಂಗ್ ದೊರೆಯುವಂತಾಗಲು ಟಿಆರ್‍ಪಿ  ರೇಟಿಂಗ್ ತಿರುಚಲು ನನ್ನ ತಂಡದ ಜತೆ ಕೆಲಸ ಮಾಡಿದ್ದೆ. 2017ರಲ್ಲಿ ಅರ್ನಬ್ ಅವರನ್ನು ಸೈಂಟ್ ರೀಜಿಸ್ ಹೋಟೆಲ್‍ನಲ್ಲಿ ಭೇಟಿಯಾಗಿದ್ದಾಗ ನನ್ನ ಕುಟುಂಬದ ಫ್ರಾನ್ಸ್ ಹಾಗೂ ಸ್ವಿಝರ್‌ ಲ್ಯಾಂಡ್ ಪ್ರವಾಸಕ್ಕಾಗಿ 6,000 ಡಾಲರ್ ನೀಡಿದ್ದರು ಹಾಗೂ 2019ರಲ್ಲಿ ಮತ್ತೆ ಅದೇ ಸ್ಥಳದಲ್ಲಿ ಭೇಟಿಯಾದ ಗೋಸ್ವಾಮಿ ನನ್ನ ಕುಟುಂಬದ ಸ್ವೀಡನ್ ಹಾಗೂ  ಡೆನ್ಮಾರ್ಕ್ ಪ್ರವಾಸಕ್ಕಾಗಿ 6,000 ಡಾಲರ್ ನೀಡಿದ್ದರು. ಗೋಸ್ವಾಮಿ 2017ರಲ್ಲಿ ನನ್ನನ್ನು ಐಟಿಸಿ ಪರೇಲ್ ಹೋಟೆಲ್‍ನಲ್ಲಿ ಭೇಟಿಯಾಗಿ ರೂ. 20 ಲಕ್ಷ ನಗದು ನೀಡಿದ್ದರು, 2018 ಹಾಗೂ 2019ರಲ್ಲಿ ಭೇಟಿಯಾದಾಗಲೂ ತಲಾ ರೂ. 10 ಲಕ್ಷ ನೀಡಿದ್ದರು" ಎಂದು ದಾಸಗುಪ್ತಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ಚಾರ್ಜ್ ಶೀಟ್‍ನಲ್ಲಿ ಉಲ್ಲೇಖವಾಗಿದೆ.

ಆದರೆ ದಾಸಗುಪ್ತಾ ಅವರ ವಕೀಲ ಅರ್ಜುನ್ ಸಿಂಗ್ ಪ್ರತಿಕ್ರಿಯಿಸಿ ಈ ವಿಚಾರವನ್ನು ಅಲ್ಲಗಳೆದಿದ್ದಾರಲ್ಲದೆ ಒತ್ತಡದಿಂದಾಗಿ ಇಂತಹ ಹೇಳಿಕೆಯನ್ನು ನೀಡಿರಬಹುದು, ಎಂದಿದ್ದಾರೆ. ಅರ್ನಬ್ ಗೋಸ್ವಾಮಿ ಕಡೆಯಿಂದ ಈ ನಿಟ್ಟಿನಲ್ಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News