ಸಿಕ್ಕಿಂ ಗಡಿಯಲ್ಲಿ ಭಾರತ-ಚೀನಾ ಸೈನಿಕರ ಘರ್ಷಣೆ, ಎರಡೂ ಕಡೆಯ ಸೈನಿಕರಿಗೆ ಗಾಯ

Update: 2021-01-25 06:47 GMT

ಹೊಸದಿಲ್ಲಿ: ಲಡಾಖ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ ನಡೆಯುತ್ತಿರುವಾಗ ಕಳೆದ ವಾರ ಉತ್ತರ ಸಿಕ್ಕಿಂನ ನಾಕುಲಾ ಪ್ರದೇಶದ್ಲ ಗಡಿಯುದ್ದಕ್ಕೂ ಒಳನುಗ್ಗಲು ಯತ್ನಿಸಿರುವ ಚೀನಿಯರ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ. ಈ ವೇಳೆ ಭಾರತ ಹಾಗೂ ಚೀನಾ ಸೈನಿಕರು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದು ಪರಿಣಾಮವಾಗಿ ಎರಡೂ ಕಡೆ ಸೈನಿಕರಿಗೆ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಸೈನಿಕರು ಉತ್ತರ ಸಿಕ್ಕಿಂನ ನಾಕು ಲಾ ಪ್ರದೇಶದಲ್ಲಿ ಗಡಿ ದಾಟಿ ಬರಲು ಯತ್ನಿಸಿದ್ದು, ಭಾರತೀಯ ಸೈನಿಕರು ಅವರಿಗೆ ಸವಾಲಾಸೆದರು. ಇದರಿಂದಾಗಿ ಎರಡೂ ಕಡೆಯ ಸೈನಿಕರ ನಡುವೆ  ತೀವ್ರ ಘರ್ಷಣೆ ಸಂಭವಿಸಿದೆ. ಹಿಂಸಾತ್ಮಕ ಘರ್ಷಣೆಯಿಂದಾಗಿ ಎರಡೂ ಕಡೆಯ ಸೈನಿಕರಿಗೆ ಗಾಯವಾಗಿದೆ. ಚೀನಾದ ಸುಮಾರು 20 ಸೈನಿಕರು ಹಾಗೂ ಭಾರತದ ನಾಲ್ವರ ಸೈನಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಸಿಕ್ಕಿಂನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ ಭಾರತೀಯ ಸೇನೆಯ ಸೈನಿಕರು ಚೀನಾವನ್ನು ಹಿಂದಕ್ಕೆ ತಳ್ಳುವಲ್ಲಿ ಯಶಸ್ವಿಯಾದರು. ಘರ್ಷಣೆ ನಡೆದಿರುವ ಸಿಕ್ಕಿಂನ ಸ್ಥಳವು ಸದ್ಯ ಉದ್ವಿಗ್ನವಾಗಿದೆ. ಆದರೆ ಸ್ಥಿರವಾಗಿದೆ ಎಂದು 'ಇಂಡಿಯಾ ಟುಡೇ'ಗೆ ಮೂಲಗಳು ತಿಳಿಸಿವೆ.

ಭಾರತ ಹಾಗೂ ಚೀನಾ ಪೂರ್ವ ಲಡಾಖ್‍ನಲ್ಲಿ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ರವಿವಾರ 9ನೇ ಸುತ್ತಿನ ಮಾತುಕತೆ ನಡೆಸಿದ ಮರುದಿನ ಈ ಘಟನೆ ನಡೆದಿದೆ. ಎರಡೂ ಕಡೆಯ ಮಾತುಕತೆ 15 ಗಂಟೆಗಳ ಕಾಲ ನಡೆದಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News