ಪ್ರತೀ ಪರ್ಮಿಟ್‌ಗೆ 300 ಲೀ. ಸೀಮೆಎಣ್ಣೆ ನೀಡಲು ಗಿಲ್‌ನೆಟ್ ಮೀನುಗಾರರ ಆಗ್ರಹ

Update: 2021-01-25 07:08 GMT

ಮಂಗಳೂರು, ಜ.25: ರಾಜ್ಯ ಸರಕಾರವು ಪ್ರತೀ ಪರ್ಮಿಟ್‌ಗೆ 300 ಲೀ. ಸೀಮೆಎಣ್ಣೆ ನೀಡಬೇಕು ಎಂದು ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಮೆಎಣ್ಣೆಯ ಅಭಾವದಿಂದ ನಾಡದೋಣಿ ಮೀನುಗಾರರು ಮೀನುಗಾರಿಕೆ ನಡೆಸಲು ಅಸಹಾಯಕರಾಗಿದ್ದಾರೆ. ಕೊರೋನ-ಲಾಕ್‌ಡೌನ್ ಹಿನ್ನಲೆಯಲ್ಲಿ ಅತಂತ್ರ ಸ್ಥಿತಿಗೆ ತಲುಪಿರುವ ಮೀನುಗಾರರು ಇದೀಗ ಸಬ್ಸಿಡಿ ಸಹಿತ ಸೀಮೆಎಣ್ಣೆ ಸಿಗದೆ ಪರದಾಡುವಂತಾಗಿದೆ. ಇದರಿಂದ ಜಿಲ್ಲೆತ 1322 ನಾಡದೋಣಿ ಮೀನುಗಾರರಲ್ಲದೆ, ಅವರನ್ನು ಅವಲಂಬಿಸಿರುವ 50 ಸಾವಿರಕ್ಕೂ ಅಧಿಕ ಮೀನುಗಾರ ಕುಟುಂಬಸ್ಥರು ಬೀದಿಪಾಲಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರೈತರು ಭೂಮಿ ಮೇಲಿನ ಅನ್ನದಾತರಾದರೆ, ಮೀನುಗಾರರು ನೀರ ಮೇಲಿನ ಅನ್ನದಾತರಾಗಿದ್ದಾರೆ. ಆದರೆ ಸರಕಾರದ ರೈತರಂತೆ ಮೀನುಗಾರರ ಸಮಸ್ಯೆಯನ್ನು ಕೂಡ ಆಲಿಸಲು ಸಿದ್ಧವಿಲ್ಲ. ಕಡಲತಡಿಯಲ್ಲಿ ಸಮಸ್ಯೆ ಎದುರಿಸುತ್ತಿರುವ ರೈತರ ಅಹವಾಲನ್ನು ಸರಕಾರದ ಗಮನ ಸೆಳೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಲಿ ಹಸನ್ ಹೇಳಿದರು.

 ಸಂಘದ ಕಾರ್ಯಾಧ್ಯಕ್ಷ ಸುಭಾಷ್ ಕಾಂಚನ್ ಮಾತನಾಡಿ, ಕಳೆದ ವರ್ಷದ ಅಕೋಬರ್‌ನಲ್ಲಿ ಕೇವಲ 500 ಪರ್ಮಿಟ್‌ಗಳಿಗೆ ಮಾತ್ರ ಸಬ್ಸಿಡಿ ಸಹಿತ ಸೀಮೆಎಣ್ಣೆ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಾವೊಬ್ಬ ಮೀನುಗಾರರಿಗೂ ಸೀಮೆಎಣ್ಣೆ ಸಿಕ್ಕಿಲ್ಲ. ಈ ವರ್ಷದ ಜನವರಿಯಲ್ಲಿ ಪ್ರತಿಯೊಂದು ಪರ್ಮಿಟ್‌ಗೆ ಕೇವಲ 130 ಲೀ. ಸೀಮೆಎಣ್ಣೆ ಸಿಕ್ಕಿದೆ. ಸಬ್ಸಿಡಿ ರಹಿತ ಸೀಮೆಎಣ್ಣೆ ಪಡೆದು ಮೀನುಗಾರಿಕೆ ನಡೆಸಲು ಸಾಧ್ಯವೇ ಇಲ್ಲವಾಗಿದೆ. ಈ ಬಗ್ಗೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ, ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.

ಸರಕಾರ ಹಂಚಿಕೊಡುವ ಸಬ್ಸಿಡಿ ಸಹಿತ ಸೀಮೆಎಣ್ಣೆಯನ್ನು ಪಡೆಯಲು ರಾತ್ರೋರಾತ್ರಿ ಪಂಪ್ ಮುಂದೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ಬಂದಿದೆ. ಇಂತಹ ದಯನೀಯ ಸ್ಥಿತಿ ಕಡಲಮಕ್ಕಳಿಗೆ ಬಂದಿರುವುದು ಶೋಚನೀಯ. ಹಾಗಾಗಿ ಸರಕಾರ ಸಬ್ಸಿಡಿ ಸಹಿತ ಸೀಮೆಎಣ್ಣೆಯನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಸಂಘದ ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಬಶೀರ್, ಉಪಾಧ್ಯಕ್ಷ ಪ್ರಾಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News