ಉಡುಪಿ: ಎಎಸ್ಸೈ ಪ್ರಕಾಶ್ ರಾಷ್ಟ್ರಪತಿ ವಿಶಿಷ್ಟ ಪೊಲೀಸ್ ಸೇವಾ ಪದಕಕ್ಕೆ ಆಯ್ಕೆ

Update: 2021-01-25 08:16 GMT

ಉಡುಪಿ, ಜ.25: ಈ ಸಾಲಿನ ರಾಷ್ಟ್ರಪತಿ ವಿಶಿಷ್ಟ ಪೊಲೀಸ್ ಸೇವಾ ಪದಕಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಕ್ರೈಮ್ ರೆಕಾರ್ಡ್ ಬ್ಯುರೋದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬ್ರಹ್ಮಾವರ ಆಯ್ಕೆಯಾಗಿದ್ದಾರೆ.

1993ರಲ್ಲಿ ಪೊಲೀಸ್ ಇಲಾಖೆಗೆ ಕಾನ್‌ಸ್ಟೇಬಲ್ ಆಗಿ ಸೇರ್ಪಡೆಗೊಂಡ ಪ್ರಕಾಶ್, ಅವಿಭಜಿತ ದ.ಕ. ಜಿಲ್ಲೆಯ ವೇಣೂರು, ಉಡುಪಿ ಸಂಚಾರ, ಡಿಸಿಆರ್‌ಬಿ, ಮಣಿಪಾಲ, ಕಾಪು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2009ರಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಮತ್ತು 2017ರಲ್ಲಿ ಎಎಸ್ಸೈ ಆಗಿ ಅವರು ಭಡ್ತಿ ಹೊಂದಿದರು. ಕಳೆದ 2018ರಿಂದ ಇವರು ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು 2005ರಲ್ಲಿ ಹೈದರಬಾದ್ ನಲ್ಲಿ ಮತ್ತು 2009ರಲ್ಲಿ ಬೆಂಗಳೂರಿನಲ್ಲಿ ನಡೆದ ಆಲ್ ಇಂಡಿಯಾ ಪೊಲೀಸ್ ಡ್ಯುಟಿ ಮೀಟ್‌ನ ಸ್ಪರ್ಧೆಯಲ್ಲಿ ತಲಾ ಒಂದು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. ಗಂಗೊಳ್ಳಿ, ಮಣಿಪಾಲ, ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಇವರು ಸಹಕಾರ ನೀಡಿದ್ದರು. ಇವೆಲ್ಲವನ್ನು ಗುರುತಿಸಿ ಇವರನ್ನು ರಾಷ್ಟ್ರಪತಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News