ಅಕ್ಷತಾ ಕೃಷ್ಣಮೂರ್ತಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ

Update: 2021-01-25 13:33 GMT

ಉಡುಪಿ, ಜ.25: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇವರ ಜಂಟಿ ಆಶ್ರಯದಲ್ಲಿ ನೀಡುವ 2020ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಕವಯಿತ್ರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಇಂದು ಪ್ರದಾನ ಮಾಡಲಾಯಿತು.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಕ್ಷತಾ ಕೃಷ್ಣಮೂರ್ತಿ, ಕವಿತೆ ಎಂಬುದೊಂದು ವಿಸ್ಮಯ. ಅದಕ್ಕೆ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ ಕಡೆಂಗೋಡ್ಲು ಅವರಂಥ ದಿಗ್ಗಜ್ಜರ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕವಿತ್ವದ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.

ತಾನು ಶಿಕ್ಷಕಿಯಾಗಿರುವ ಜೊಯಿಡಾ ತಾಲೂಕಿನ ಅಣಶಿ ಎಂಬ ಕುಗ್ರಾಮದ ಲ್ಲಿರುವ ಶಾಲೆ ಹುಲಿ, ಚಿರತೆ, ಕರಡಿಗಳು ಮುಕ್ತವಾಗಿ ಓಡಾಡುವ ದಟ್ಟಕಾಡಿನ ನಡುವಿದೆ. ಇಲ್ಲಿನ ಶಾಲೆಗೆ ಬರುವ ಮಕ್ಕಳಿಂದ, ಗ್ರಾಮದ ಕುಡುಬಿಯರು, ಗೌಳಿಯರ ಹೆಣ್ಣು ಮಕ್ಕಳಿಂದ ನನ್ನ ಕವನಗಳು ಹುಟ್ಟಿಕೊಂಡಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ಪ್ರೊ.ಕೆ.ಪಿ.ರಾವ್ ಮಾತನಾಡಿ, ನಮ್ಮ ಶಾಲಾ ಪಠ್ಯಪುಸ್ತಕಗಳು ನಿಂತ ನೀರಾಗ ಬಾರದು. ಕಾಲಕಾಲಕ್ಕೆ ‘ಜ್ಞಾನ’ದಲ್ಲಾಗುವ ಬದಲಾವಣೆಗಳು, ಹೊಸ ಬೆಳವಣಿಗೆಗಳಿಗೆ ಅಲ್ಲಿ ಸ್ಥಾನವಿರಬೇಕು. ಶಿಕ್ಷಕರು ಅಪಾರ ಓದಿನ ಗುಣ, ಜ್ಞಾನದ ಹಸಿವನ್ನು ಹಿಂಗಿಸಿಕೊಳ್ಳುವ ಗುಣವ್ನು ಬೆಳೆಸಿಕೊಂಡಿರಬೇಕು ಎಂದರು.

‘ದಕ್ಷಿಣ ಕನ್ನಡದ ಕಾವ್ಯ’ದ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಲೇಖಕ ಹಾಗೂ ವಿಮರ್ಶಕ ಡಾ.ಬಿ.ಜನಾರ್ದನ ಭಟ್, 120 ವರ್ಷಗಳ ದಕ್ಷಿಣ ಕನ್ನಡ ಕಾವ್ಯ ಇತಿಹಾಸದಲ್ಲಿ ಮುದ್ದಣ ಮಾರ್ಗ ಸಂಪ್ರದಾಯಕ್ಕೆ ವಿದಾಯ ಹೇಳಿ ಹೊಸಗನ್ನಡ ಕವಿಯಾಗಿ ಗುರುತಿಸಲ್ಪಟ್ಟರೆ, ಪಂಜೆ ಹಾಗೂ ಕಡೆಂಗೋಡ್ಲು ಶಂಕರ ಭಟ್ಟರು ಆಧುನಿಕ ಕಾವ್ಯ ಪ್ರಕಾರಕ್ಕೆ ನೆಲೆ ಒದಗಿಸಿದರೆ, ಎಂ.ಗೋಪಾಲಕೃಷ್ಣ ಅಡಿಗರು ನವ್ಯ ಪ್ರಕಾರಕ್ಕೆ ನೆಲೆಯೊದಗಿಸಿದರು. ಈಗ ಕೆ.ವಿ.ತಿರುಮಲೇಶ ಅಸಂಗತ ಕಾವ್ಯ ಪ್ರಕಾರಕ್ಕೆ ನೆಲೆಯೊದಗಿಸಲು ಹೆಣಗುತಿದ್ದಾರೆ ಎಂದರು.

ಇವರಲ್ಲಿ ಕಡೆಂಗೋಡ್ಲು, ಆಧುನಿಕತೆಯನ್ನು ಕಾವ್ಯ ಮತ್ತು ಬರವಣಿಗೆಯಲ್ಲಿ ತಂದವರು. ಸ್ವಾತಂತ್ರ ಹೋರಾಟಗಾರ, ಪ್ರಜಾಪ್ರಭುತ್ವವಾದಿ ಯಾಗಿ ಖಂಡ ಕಾವ್ಯಗಳಿಗೆ ಆಧುನಿಕತೆಯ ಸ್ಪರ್ಷ ನೀಡಿದವರು. ಸ್ತ್ರೀಸಂವೇದನೆಯನ್ನು ಅದ್ಭುತ ರೀತಿಯಲ್ಲಿ ಕನ್ನಡ ಕಾವ್ಯ ಮತ್ತು ಕತೆಗಳಲ್ಲಿ ಮೂಡಿಸಿದವರು ಎಂದರು.

ಅಕ್ಷತಾ ಕೃಷ್ಣಮೂರ್ತಿಯವರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ವಿಜೇತ ‘ನಾನು ದೀಪ ಹಚ್ಚಬೇಕೆಂದಿದ್ದೆ’ ಕೃತಿಯನ್ನು ಬಿಡುಗಡೆಗೊಳಿಸಿದ ಖ್ಯಾತ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅವರು ಅಭಿನಂದನಾ ಭಾಷಣ ಮಾಡಿದರು.

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿ ದರು. ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ವಂದಿಸಿದರು. ಸಂಶೋಧನಾ ವಿದ್ಯಾರ್ಥಿ ಪ್ರಫುಲ್ಲಾ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳು ಕಡೆಂಗೋಡ್ಲು ಶಂಕರ ಭಟ್ಟರ ಕಾವ್ಯ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News