ಗೋಮಾಳ ಜಾಗವನ್ನು ಗೋಶಾಲೆಗಳಿಗೆ ನೀಡಲು ನಿರ್ಧಾರ: ಸಚಿವ ಆರ್. ಅಶೋಕ್‌

Update: 2021-01-25 13:56 GMT

ಉಡುಪಿ, ಜ.25: ಗೋವುಗಳ ರಕ್ಷಣೆ ಮತ್ತು ಗೋ ತಳಿಗಳನ್ನು ಕಾಪಾಡ ಬೇಕಾಗಿರುವುದು ಇಂದಿನ ಅತೀ ಅಗತ್ಯವಾಗಿದ್ದು, ಅದಕ್ಕಾಗಿ ಸರಕಾರಿ ಗೋ ಮಾಳ ಜಾಗವನ್ನು ಗೋಶಾಲೆಗಳಿಗೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಶಾಲೆ ನಡೆಸುವ ಮಠ ಮಂದಿರ ಹಾಗೂ ಸಂಘ ಸಂಸ್ಥೆಗಳಿಗೆ ಮತ್ತು ಸರಕಾರ ನಡೆಸುವ ಗೋಶಾಲೆಗಳಿಗೆ ಗೋಮಾಳ ಭೂಮಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದರು.ಕುಮ್ಕಿ ಜಮೀನು ವಿಚಾರ ರೈತರು ಮತ್ತು ಸರಕಾರ ಮಧ್ಯೆ ವಿವಿಧ ರೀತಿಯ ಗೊಂದಲಗಳಿಗೆ ಕಾರಣವಾಗಿದೆ. ಮಲೆನಾಡು ಭಾಗಗಳಲ್ಲಿ ಕಾಫಿ, ಟೀ ಎಸ್ಟೇಟ್‌ಗಾಗಿ ಸರಕಾರದ 50 ಎಕರೆವರೆಗೂ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಹಲವು ವರ್ಷಗಳಿಂದ ಕಾಫಿ ಬೆಳೆಸಿ ಅವರು ಸಂಪಾದನೆ ಮಾಡಿಕೊಂಡರೂ ಸರಕಾರಕ್ಕೆ ಯಾವುದೇ ಆದಾಯ ಬರುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಕೇರಳ ಮಾದರಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ದರ ನಿಗದಿ ಪಡಿಸಿ ಎಸ್ಟೇಟ್ ಮಾಲಕರಿಗೆ ಲೀಸ್‌ಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿನ 6ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಜಮೀನನನ್ನು ಅರಣ್ಯ ಇಲಾಖೆಯು ವಾಪಾಸ್ಸು ಕಂದಾಯ ಇಲಾಖೆಗೆ ನೀಡಲು ಒಪ್ಪಿಕೊಂಡಿದೆ. ಅದೇ ರೀತಿ ನಾವು ಕೂಡ ಅವರಿಗೆ ಅಂದಾಜು ಮೂರು ಲಕ್ಷ ಹೆಕ್ಟೇರ್ ಭೂಮಿಯನ್ನು ನೀಡಲು ಒಪ್ಪಿಕೊಂಡಿದ್ದೇವೆ. ಅರಣ್ಯ ಇಲಾಖೆಯಿಂದ ಭೂಮಿ ಬಂದ ತಕ್ಷಣ ಸರಕಾರದ ವಶಕ್ಕೆ ತೆಗೆದುಕೊಂಡು ಉಳುಮೆ ಮಾಡುತ್ತಿದ್ದವರಿಗೆ ನೀಡಲಾಗುವುದು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News