ಅಮೆರಿಕಾ ಅಧ್ಯಕ್ಷರ ಟ್ವೀಟ್‌ ತಿರುಚಿ ನರೇಂದ್ರ ಮೋದಿಯನ್ನು ʼವಿಶ್ವನಾಯಕʼ ಮಾಡಿದ ಬಿಜೆಪಿಗರು!

Update: 2021-01-25 14:16 GMT

ಹೊಸದಿಲ್ಲಿ,ಜ.25: ಡೊನಾಲ್ಡ್‌ ಟ್ರಂಪ್‌ ರನ್ನು ಮಣಿಸಿ ಅಮೆರಿಕಾ ಅಧ್ಯಕ್ಷ ಗಾದಿಗೇರಿರುವ ಜೋ ಬೈಡನ್‌ ವರು ಅಧಿಕಾರ ಸ್ವೀಕರಿಸುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯು ಅವರಿಗೆ ಟ್ವೀಟ್‌ ಮೂಲಕ ಶುಭಾಶಯ ಸಲ್ಲಿಸಿದ್ದರು. ಈ ವೇಳೆ ನರೇಂದ್ರ ಮೋದಿಗೆ ಧನ್ಯವಾದ ಹೇಳುತ್ತಿರುವ ಕುರಿತು ಬೈಡನ್‌ ರ ನಕಲಿ ಟ್ವೀಟ್‌ ಒಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಇದರ ಸತ್ಯಾಸತ್ಯತೆಯನ್ನು ಸುಳ್ಳುಸುದ್ದಿ ಪತ್ತೆಹಚ್ಚುವ boomlive.in ಬಿಚ್ಚಿಟ್ಟಿದೆ.

ನರೇಂದ್ರ ಮೋದಿಯ ಶುಭಾಶಯಕ್ಕೆ ಬೈಡನ್‌ ಪ್ರತಿಕ್ರಿಯಿಸುವಂತೆ ಇರುವ ಟ್ವಿಟರ್‌ ಸ್ಕ್ರೀನ್‌ ಶಾಟ್‌ ನಲ್ಲಿ ಮೋದಿಯನ್ನುದ್ದೇಶಿಸಿದ ಬೈಡನ್‌ "ಧನ್ಯವಾದಗಳು ವಿಶ್ವ ನಾಯಕ ನರೇಂದ್ರ ಮೋದಿ" ಎಂದು ಬರೆದಿರುವ ನಕಲಿ ಟ್ವೀಟ್‌ ವೈರಲ್‌ ಆಗಿದೆ. 

ಬೂಮ್‌ ಲೈವ್‌ ಪ್ರಕಾರ ಇದುವರೆಗೂ ಬೈಡನ್‌ ನರೇಂದ್ರ ಮೋದಿಯನ್ನು ವಿಶ್ವನಾಯಕ ಎಂದು ಸಂಬೋಧಿಸಿ ಪ್ರತಿಕ್ರಿಯೆ ನೀಡಿಲ್ಲ. ಅಂತಹಾ ಟ್ವೀಟ್‌ ಅವರ ಖಾತೆಯಿಂದ ಬಂದಿಲ್ಲ. ತಾನು ಅಧ್ಯಕ್ಷ ಹುದ್ದೇಗೇರುವ ಕುರಿತು ಅವರ ಫೋಟೊದೊಂದಿಗೆ ಟ್ವೀಟ್‌ ಮಾಡಿದ್ದು, ಇದನ್ನೇ ಬಳಸಿಕೊಂಡು ಫೋಟೊ ಎಡಿಟ್‌ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಈ ನಡುವೆ ಸಾಮಾಜಿಕ ತಾಣದಾದ್ಯಂತ ಈ ಟ್ವೀಟ್‌ ವ್ಯಾಪಕ ಸದ್ದು ಮಾಡಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳ ನಡುವೆ ನಕಲಿ ಟ್ವೀಟ್‌ ಹರಿದಾಡಿದೆ. ನಮ್ಮ ಪ್ರಧಾನಿ ನಮ್ಮ ಹೆಮ್ಮೆ ಎಂಬ ರೀತಿಯ ಬರಹಗಳನ್ನು ಈ ಸ್ಕ್ರೀನ್‌ ಶಾಟ್‌ ನೊಂದಿಗೆ ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಟ್ವೀಟ್‌ ಮಾಡಿದ್ದರು ಎನ್ನಲಾಗಿದೆ. ಟ್ವೀಟ್‌ ನಕಲಿ ಎಂದು ತಿಳಿದ ಬಳಿಕವೂ ಹಲವಾರು ಮಂದಿ ಇನ್ನೂ ಟ್ವೀಟ್‌ ಡಿಲೀಟ್‌ ಮಾಡಿಲ್ಲ ಎಂದು ತಿಳಿದು ಬಂದಿದೆ. 

photo: boomlive.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News