ಕೇಂದ್ರ ಬಜೆಟ್ ಮಂಡನೆ ದಿನದಂದು ಸಂಸತ್ತಿನತ್ತ ಮೆರವಣಿಗೆ ನಡೆಸಲು ರೈತರ ಯೋಜನೆ

Update: 2021-01-25 15:51 GMT

ಹೊಸದಿಲ್ಲಿ,ಜ.25: ಕೇಂದ್ರ ಮುಂಗಡಪತ್ರ ಮಂಡನೆಯ ದಿನವಾಗಿರುವ ಫೆ.1ರಂದು ವಿವಿಧೆಡೆಗಳಿಂದ ಸಂಸತ್ತಿಗೆ ಜಾಥಾ ನಡೆಸಲಾಗುವುದು ಎಂದು ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ರೈತ ಸಂಘಟನೆಗಳು ಸೋಮವಾರ ಪ್ರಕಟಿಸಿವೆ. ಪ್ರತಿಭಟನಾ ನಿರತ ರೈತರು ಈಗಾಗಲೇ ಹಮ್ಮಿಕೊಂಡಿರುವ ಟ್ರಾಕ್ಟರ್ ರ್ಯಾಲಿಯು ನಿಗದಿಯಂತೆ ಜ.26ರಂದು ನಡೆಯಲಿದೆ.

ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ತಮ್ಮ ನಿಲುವಿಗೆ ರೈತರು ಅಂಟಿಕೊಂಡಿದ್ದಾರೆ ಮತ್ತು ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕ್ರಾಂತಿಕಾರಿ ಕಿಸಾನ ಯೂನಿಯನ್‌ನ ನಾಯಕ ದರ್ಶನ ಪಾಲ್ ಅವರು,‘ಫೆ.1ರಂದು ನಾವು ಸಂಸತ್ತಿಗೆ ಕಾಲ್ನಡಿಗೆ ಜಾಥಾವನ್ನು ನಡೆಸಲಿದ್ದೇವೆ. ನಾಳೆಯ ಟ್ರಾಕ್ಟರ್ ರ್ಯಾಲಿಯು ಸರಕಾರಕ್ಕೆ ನಮ್ಮ ಬಲವನ್ನು ಮನದಟ್ಟು ಮಾಡಲಿದೆ ಮತ್ತು ಪ್ರತಿಭಟನೆ ಪಂಜಾಬ್ ಮತ್ತು ಹರ್ಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ,ಅದು ಇಡೀ ರಾಷ್ಟ್ರದ ಆಂದೋಲನವಾಗಿದೆ ಎನ್ನುವುದು ಅವರಿಗೆ (ಸರಕಾರ) ತಿಳಿಯಲಿದೆ ’ಎಂದರು.

  ಅಂದೋಲನವು ಈವರೆಗೆ ಶಾಂತಿಯುತವಾಗಿ ನಡೆದಿರುವಂತೆ ಪ್ರತಿಯೊಂದು ಜಾಥಾ ಮತ್ತು ಪ್ರತಿಭಟನೆ ಶಾಂತವಾಗಿಯೇ ನಡೆಯಲಿವೆ. ಟ್ರಾಕ್ಟರ್ ಪರೇಡ್‌ಗಾಗಿ ಇಲ್ಲಿಗೆ ಆಗಮಿಸಿರುವ ರೈತರು ವಾಪಸ್ ಹೋಗುವುದಿಲ್ಲ ಮತ್ತು ಪ್ರತಿಭಟನೆಯಲ್ಲಿ ಜೊತೆಗೂಡಲಿದ್ದಾರೆ ಎಂದರು.

ಮಂಗಳವಾರದ ಗಣತಂತ್ರ ದಿನಾಚರಣೆ ಮತ್ತು ರೈತರ ಟ್ರಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ ರಾಜಪಥ ಮತ್ತು ದಿಲ್ಲಿಯ ಹಲವಾರು ಗಡಿಕೇಂದ್ರಗಳಲ್ಲಿ ಸಾವಿರಾರು ಸಶಸ್ತ್ರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ರಾಷ್ಟ್ರ ರಾಜಧಾನಿಗೆ ಹಲವು ಸ್ತರಗಳ ಭದ್ರತೆಯನ್ನೊದಗಿಸಲಾಗಿದೆ.

ರೈತರ ಟ್ರಾಕ್ಟರ್ ರ‍್ಯಾಲಿ ಮಧ್ಯ ದಿಲ್ಲಿಯನ್ನು ಪ್ರವೇಶಿಸುವುದಿಲ್ಲ ಮತ್ತು ಗಣತಂತ್ರ ದಿನದ ಪರೇಡ್ ಮುಗಿದ ಬಳಿಕವೇ ಆರಂಭಗೊಳ್ಳುತ್ತದೆ. ಸಿಂಘು,ಟಿಕ್ರಿ ಮತ್ತು ಘಾಜಿಪುರ ಗಡಿ ಕೇಂದ್ರಗಳಿಂದ ದಿಲ್ಲಿಯನ್ನು ಪ್ರವೇಶಿಸಲಿರುವ ರ್ಯಾಲಿಯಲ್ಲಿ ಸುಮಾರು ಎರಡು ಲಕ್ಷ ಟ್ರಾಕ್ಟರ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News