ಮಾವೋವಾದಿ ನಂಟು ಆರೋಪ ಹೊತ್ತು ಆರು ವರ್ಷದಿಂದ ಜಾಮೀನು ದೊರೆಯದೆ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟ ಕಾಂಚನ್ ನಾನಾವರೆ

Update: 2021-01-25 15:20 GMT

ಮುಂಬೈ,ಜ.25: ಮಾವೋವಾದಿ ಆಂದೋಲನದಲ್ಲಿ ಸಕ್ರಿಯರಾಗಿದ್ದಾರೆಂಬ ಆರೋಪದ ಮೇಲೆ 2014ರಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿಗಳ ಹಕ್ಕುಗಳ ಹೋರಾಟಗಾರ್ತಿ ಕಂಚನ್ ನಾನಾವರೆ ಪುಣೆಯ ಸರಕಾರಿ ಸಸೂನ್ ಆಸ್ಪತ್ರೆಯಲ್ಲಿ ಹೃದಯ ಮತ್ತು ಮೆದುಳು ಸಂಬಂಧಿತ ಸಮಸ್ಯೆಗೆ ಬಲಿಯಾಗಿದ್ದಾರೆ. ಆದಿವಾಸಿ ಸಮುದಾಯಕ್ಕೆ ಸೇರಿದ್ದ ಕಾಂಚನ್ ಅವರಿಗೆ 38 ವರ್ಷ ವಯಸ್ಸಾಗಿತ್ತು.

ಹುಟ್ಟುವಾಗಲೇ ಹೃದಯ ಸಮಸ್ಯೆ ಎದುರಿಸುತ್ತಿದ್ದ ಕಾಂಚನ್, ಕಳೆದ ವಾರ ಮೆದುಳಿನ ಸಮಸ್ಯೆಗೆ ತುತ್ತಾಗಿದ್ದರು. ಆಕೆಗೆ ಜನವರಿ 16ರಂದು ಮೆದುಳಿನ ಶಸ್ತ್ರಕ್ರಿಯೆ ನಡೆಸುವುದಕ್ಕಿಂತ ಮುನ್ನ ಆಕೆಯ ಆರೋಗ್ಯ ಸ್ಥಿತಿ ಕುರಿತು ಜೈಲಿನ ಅಥವಾ ಆಸ್ಪತ್ರೆಯ ಅಧಿಕಾರಿಗಳು ಆಕೆಯ ಕುಟುಂಬ ಹಾಗೂ ವಕೀಲರಿಗೆ ತಿಳಿಸಿಲ್ಲ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಕಳೆದೆರಡು ವರ್ಷಗಳ ಅವಧಿಯಲ್ಲಿ ತಮ್ಮ ವಕೀಲರ ಮುಖಾಂತರ ಕಾಂಚನ್ ಜಾಮೀನಿಗಾಗಿ ಸೆಶನ್ಸ್ ನ್ಯಾಯಾಲಯ ಹಾಗೂ ಬಾಂಬೆ ಹೈಕೋರ್ಟ್‍ಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತಗೊಂಡಿತ್ತು.

ಆರೋಗ್ಯ ಕಾರಣಗಳನ್ನು ನೀಡಿ ಜಾಮೀನು ಕೋರಿ ಅಕ್ಟೋಬರ್ ತಿಂಗಳಲ್ಲಿ ಬಾಂಬೆ ಹೈಕೋರ್ಟ್‍ಗೆ ಸಲ್ಲಿಸಲಾಗಿದ್ದ ಅಪೀಲು ಇನ್ನೂ ಬಾಕಿಯಿದೆ. ಆಕೆಯ ಹದಗೆಡುತ್ತಿದ್ದ ಆರೋಗ್ಯ ಹಾಗೂ ಆಕೆಗೆ ಹೃದಯದ ಕಸಿ ಅಗತ್ಯವಿದೆ ಎಂದು ಹೇಳುವ ವೈದ್ಯಕೀಯ ವರದಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದರೂ ಫಲ ನೀಡಿರಲಿಲ್ಲ.

ಆಕೆಯ ವಿರುದ್ಧ ದಾಖಲಾಗಿದ್ದ 9 ಪ್ರಕರಣಗಳ ಪೈಕಿ ಆರರಲ್ಲಿ ಆಕೆ ಖುಲಾಸೆಗೊಂಡಿದ್ದರು.  ಆಕೆ ಹಾಗೂ ಆಕೆಯ ಪತಿಯನ್ನು 2014ರಲ್ಲಿ ಬಂಧಿಸಿದ್ದ ಪೊಲೀಸರು ಆಕೆಯ ವಿರುದ್ಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹೇರಿದ್ದರು.

ಕಾಂಚನ್ ಕುಟುಂಬಕ್ಕೆ ಜನವರಿ 24, ರವಿವಾರ  ದೊರೆತ ಪತ್ರದಲ್ಲಿ ಆಕೆಯ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ವಿವರಿಸಲಾಗಿತ್ತು. ಇಂದು (ಸೋಮವಾರ) ಅವರಿಗೆ ಬಂದ ಕರೆಯೊಂದು ಆಕೆ ನಿಧನರಾಗಿದ್ಧಾರೆಂಬ ಮಾಹಿತಿ ನೀಡಿತ್ತು. ಆಕೆಯ ಮೃತದೇಹವನ್ನು ಚಂದ್ರಾಪುರ ಜಿಲ್ಲೆಯ ಆಕೆಯ ಊರಾದ ಬಲ್ಲಾರಶಾಹ್‍ಗೆ ಕೊಂಡೊಯ್ಯಲು ವಕೀಲರ ತಂಡ ನ್ಯಾಯಾಲಯದ ಮೊರೆ ಹೋಗಲಿದೆ.

ಕಾಂಚನ್ 2004ರಿಂದ ದೇಶಭಕ್ತಿ ಯುವ ಮಂಚ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಆದರೆ ಇದು ಮಾವೋವಾದಿಗಳ ಜತೆ ನಂಟು ಹೊಂದಿದ ಸಂಘಟನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಚನ್ ಅವರು 2008ರಲ್ಲಿ ಮೊದಲು ಬಂಧಿತರಾಗಿದ್ದರೂ ನಂತರ ಬಿಡುಗಡೆಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News