ಮಾರಕಾಯುಧದಿಂದ ಹೊಡೆದು ಕಾರ್ಮಿಕನ ಹತ್ಯೆ

Update: 2021-01-25 16:30 GMT

ಮಂಗಳೂರು, ಜ.25: ಹಂಪನಕಟ್ಟೆಯ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೆಳಭಾಗ ಕಾರ್ಮಿಕನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದ್ದು, ಮಾರಕಾಯುಧದಿಂದ ಹೊಡೆದು ಹತ್ಯೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಜಾರ್ಖಂಡ್ ಮೂಲದ ರಾಮಚಂದ್ರ (48) ಹತ್ಯೆಯಾದ ಕಾರ್ಮಿಕ ಎಂದು ಗುರುತಿಸಲಾಗಿದೆ.

ನಗರದ ಹಂಪನಕಟ್ಟೆಯ ಸಮೀಪದಲ್ಲಿ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದೆ. ಮೂವರು ಕಾರ್ಮಿಕರು ರಾತ್ರಿ ವೇಳೆ ಇದೇ ನಿರ್ಮಾಣ ಹಂತದ ಕಟ್ಟಡದ ಕೆಳಭಾಗ ಮಲಗುತ್ತಿದ್ದರು. ಹಗಲು ವೇಳೆ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿ ಮೂವರ ನಡುವೆ ಜಗಳ ನಡೆದು ಮಾರಾಯುಧದಿಂದ ರಾಮಚಂದ್ರ ಎಂಬವರನ್ನು ಹೊಡೆದು ಕೊಲೆಗೈದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇನ್ನುಳಿದ ಇಬ್ಬರು ಕಾರ್ಮಿಕರು ಸ್ಥಳದಿಂದ ನಾಪತ್ತೆಯಾಗಿದ್ದಾರೆ.

ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಕಾರ್ಮಿಕನ ಮೃತದೇಹವು ಕಟ್ಟಡದ ಕೆಳಭಾಗ ಶವವಾಗಿ ಪತ್ತೆಯಾಗಿದೆ. ಸ್ಥಳೀಯ ಮೇಸ್ತ್ರಿಯೋರ್ವರು ಕೆಲಸಕ್ಕೆಂದು ಕಟ್ಟಡದ ಬಳಿ ಬಂದಾಗ ಈ ಕೃತ್ಯ ಗಮನಕ್ಕೆ ಬಂದಿದೆ. ಮೃತದೇಹದಲ್ಲಿ ಮಾರಣಾಂತಿಕ ಗಾಯಗಳಿದ್ದು, ಬಲವಾದ ಮಾರಕಾಯುಧದಿಂದ ಹೊಡೆದ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತನು ಮಂಗಳೂರಿನಲ್ಲಿ ಒಬ್ಬನೇ ವಾಸವಾಗಿದ್ದನು. ಈತನ ಕುಟುಂಬಸ್ಥರೆಲ್ಲ ಜಾರ್ಖಂಡ್‌ನಲ್ಲಿದ್ದಾರೆ. ಕಾರ್ಮಿಕ ಮೃತಪಟ್ಟ ಸ್ಥಳದಿಂದ ನಾಪತ್ತೆಯಾದ ಇಬ್ಬರು ಕೂಡ ಜಾರ್ಖಂಡ್‌ನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News