ಬಿಹಾರ: ಸರಕಾರಿ ಅಧಿಕಾರಿಯ ಹತ್ಯೆಗೈದು ದಫನಗೈದ ದುಷ್ಕರ್ಮಿ

Update: 2021-01-25 16:32 GMT

ಪಾಟ್ನಾ, ಜ. 25: ಬಿಲ್ ಇತ್ಯರ್ಥಕ್ಕೆ ಸಂಬಂಧಿಸಿ ವಾಗ್ವಾದ ನಡೆದ ಬಳಿಕ ರಸಗೊಬ್ಬರ ವ್ಯಾಪಾರಿಯೋರ್ವ ಸರಕಾರಿ ಅಧಿಕಾರಿಯನ್ನು ಹತ್ಯೆಗೈದು ನದಿ ಸಮೀಪದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ ಘಟನೆ ಪಾಟ್ನಾ ಜಿಲ್ಲೆಯಲ್ಲಿ ಸಂಭವಿಸಿದೆ. ಈ ಘಟನೆ ಹಿನ್ನೆಲೆಯಲ್ಲಿ ಬಿಹಾರದ ಕಾನೂನು ಹಾಗೂ ಸುವ್ಯವಸ್ಥೆ ಕುರಿತು ಪ್ರತಿಪಕ್ಷಗಳು ನಿತೀಶ್ ಕುಮಾರ್ ಸರಕಾರವನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿವೆ. ನಗರದ ಕಂಕಾರ್‌ಬಾಘ್ ಪ್ರದೇಶದ ನಿವಾಸಿ ಅಜಯ್ ಕುಮಾರ್ (55) ಅವರನ್ನು ಜಿಲ್ಲೆಯ ಮಸೌರ್ಹಿಯ ಬ್ಲಾಕ್ ಕೃಷಿ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಅವರು ಜನವರಿ 18ರಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಗೌರಿಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಪನ್ಪುನ್ ನದಿಯ ಸಮೀಪ ಹೂತು ಹಾಕಿದ ಸ್ಥಿತಿಯಲ್ಲಿ ರವಿವಾರ ಪತ್ತೆಯಾಗಿತ್ತು.

ಆರೋಪಿ ಅಭಿನವ್ ಆಲಿಯಾಸ್ ಗೋಲುನನ್ನು ಶನಿವಾರ ಬಂಧಿಸಲಾಗಿತ್ತು. ಆತ ತಪ್ಪೊಪ್ಪಿಕೊಂಡು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಮೃತದೇಹವನ್ನು ಪತ್ತೆ ಮಾಡಲಾಗಿತ್ತು. ಅಜಯ್ ಕುಮಾರ್ ನಾಪತ್ತೆಯಾದ ಬಳಿಕ ಅವರ ಕುಟುಂಬದ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೆ, ರಸಗೊಬ್ಬರ ಹಾಗೂ ಬೀಜದ ವ್ಯಾಪಾರಿ 21 ವರ್ಷದ ಗೋಲು ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಪೊಲೀಸರು ಗೋಲುವನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅಜಯ್ ಕುಮಾರ್ ಅವರನ್ನು ಹತ್ಯೆಗೈದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಬಿಲ್ ಇತ್ಯರ್ಥಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಹತ್ಯೆ ನಡೆಸಿರುವುದಾಗಿ ಆತ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News