ಹೊಂಬೆಳಕು ಕನ್ನಡ ಆನ್‌ಲೈನ್ ಸಮ್ಮೇಳನ

Update: 2021-01-25 16:33 GMT

ಮಂಗಳೂರು, ಜ. 25: ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಶನ್‌ನಿಂದ ಎ.1ರಿಂದ 4ರವರೆಗೆ ‘ಭಯಮುಕ್ತ ಜೀವನ; ಸುರಕ್ಷಿತ ಸಮಾಜ’ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಆನ್‌ಲೈನ್ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿಯಾಗಿ ಹೊಂಬೆಳಕು ಕನ್ನಡ ಆನ್‌ಲೈನ್ ಸಮ್ಮೇಳನವು ರವಿವಾರ ನಡೆಯಿತು.

ಸಮ್ಮೇಳನವನ್ನು ಅಹ್ಲೆ ಹದೀಸ್ ವಿದ್ವಾಂಸ ಶೇಕ್ ಫೈಝುಲ್ಲಾಹ್ ಮದನಿ ಉದ್ಘಾಟಿಸಿದರು. ಶಾಸಕ ಯು.ಟಿ. ಖಾದರ್ ಆನ್‌ಲೈನ್ ಮೂಲಕ ಭಾಗವಹಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕರ್ನಾಟಕ ಸಲಫಿ ಅಸೋಸಿಯೇಶನ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಮೌಲವಿ ಇಜಾಝ್ ಸ್ವಲಾಹಿ ಮಾತನಾಡಿ, ಇಸ್ಲಾಮಿನ ಏಕದೇವಾರಾಧನೆ, ಪ್ರವಾದಿ ಮುಹಮ್ಮದ್‌ರ ಜೀವನ ಮತ್ತು ಪರಲೋಕದ ವಿಶ್ವಾಸವು ಭಯಮುಕ್ತ ಜೀವನ ಮತ್ತು ಸುರಕ್ಷಿತ ಸಮಾಜಕ್ಕೆ ಪೂರಕ ಎನ್ನುವುದನ್ನು ವಿವರಿಸಿದರು.

ಅಲ್ ಬಯಾನ್ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಹಫೀಝ್ ಸ್ವಲಾಹಿ ಮಾತನಾಡಿ, ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಸುಭದ್ರ ಕುಟುಂಬದ ಪಾತ್ರವನ್ನು ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್‌ರ ವಚನಗಳ ಮೂಲಕ ವಿವರಿಸಿದರು.

ಕೆಎಸ್‌ಎ ಮಂಗಳೂರು ವಿಭಾಗದ ಶಾಕಿರ್ ಉಳ್ಳಾಲ್ ಮಾತನಾಡಿದರು. ಸಮ್ಮೇಳನದಲ್ಲಿ ಮನ್‌ಹಜುಲ್ ಅಂಬಿಯಾ ಬಯಾನ್ ಅರಬಿಕ್ ಅಕಾಡಮಿಯ ನಿರ್ದೇಶಕ ಯಾಸಿರ್ ಅಲ್ ಹಿಕಮಿ ಸ್ವಾಗತಿಸಿದರು. ಅಲ್ ಬಯಾನ್ ಅರೆಬಿಕ್ ಕಾಲೇಜಿನ ಅಧ್ಯಕ್ಷ ಅಶ್ಪಾಕ್ ಉಳ್ಳಾಲ್ ವಂದಿಸಿದರು. ಕೆಎಸ್‌ಎನ ಖಲೀಲ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು ಎಂದು ಕೆಎಸ್‌ಎ ಅಸೋಸಿ ಯೇಶನ್‌ನ ಮಂಗಳೂರು ಘಟಕದ ಅಧ್ಯಕ್ಷ ಅಬ್ದುರ್ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News