ಮಾಧ್ಯಮಗಳ ನಿಯಂತ್ರಣ ಕೋರಿ ಅರ್ಜಿ:ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2021-01-25 16:51 GMT

ಹೊಸದಿಲ್ಲಿ,ಜ.25: ಭಾರತೀಯ ಮಾಧ್ಯಮಗಳ ಮೇಲೆ ನಿಯಂತ್ರಣ ಮತ್ತು ಕೋಮು ದ್ವೇಷವನ್ನು ಪ್ರಚೋದಿಸುವ ಸುದ್ದಿಗಳು,ದ್ವೇಷ ಭಾಷಣಗಳು ಮತ್ತು ಸುಳ್ಳು ಮಾಹಿತಿಗಳನ್ನು ಹರಡುತ್ತಿರುವ ಮಾಧ್ಯಮ ವೇದಿಕೆಗಳ ವಿರುದ್ಧ ದೂರುಗಳನ್ನು ನಿರ್ವಹಿಸಲು ನ್ಯಾಯಾಧಿಕರಣದ ರಚನೆಯನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ. ಮಾಧ್ಯಮಗಳಿಗಾಗಿ ಕಾನೂನು ಲಕ್ಷ್ಮಣರೇಖೆಯನ್ನು ಪುನರ್‌ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸುವಂತೆಯೂ ಅರ್ಜಿಯು ಕೋರಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ಭಾರತೀಯ ಪತ್ರಿಕಾ ಮಂಡಳಿ,ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ,ನ್ಯೂಸ್ ಬ್ರಾಡಕಾಸ್ಟರ್ಸ್ ಫೆಡರೇಷನ್,ಪಿಟಿಐ ಮತ್ತು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್‌ಗಳಿಗೂ ನೋಟಿಸುಗಳನ್ನು ಹೊರಡಿಸಿದೆ. ಸ್ವನಿಯಂತ್ರಣವು ಮಾಧ್ಯಮಗಳಲ್ಲಿಯ ಇಂದಿನ ಸ್ಥಿತಿಯನ್ನು ಬಗೆಹರಿಸುವುದಿಲ್ಲ ಎಂದು ಹೇಳಿರುವ ಚಿತ್ರನಿರ್ಮಾಪಕ ನಿಲೇಶ ನವ್ಲಾಖಾ ಮತ್ತು ಸಿವಿಲ್ ಇಂಜಿನಿಯರ್ ನಿತಿನ್ ಮೇಮನೆ ಅವರು ಸಲ್ಲಿಸಿರುವ ಅರ್ಜಿಯು,ಯಾವುದೇ ನಿಯಂತ್ರಣಗಳಿಲ್ಲದ ಮಾಧ್ಯಮಗಳು ದ್ವೇಷ ಭಾಷಣಗಳು ಮತ್ತು ಸುಳ್ಳು ಮಾಹಿತಿಗಳನ್ನು ಉತ್ತೇಜಿಸುತ್ತಿವೆ ಹಾಗೂ ಸಂವಿಧಾನದ ವಿಧಿ 19ರಡಿ ನಿಷ್ಪಕ್ಷ ಮಾಹಿತಿಗಳನ್ನು ಪಡೆಯುವ ಪ್ರಜೆಗಳ ಹಕ್ಕನ್ನು ಉಲ್ಲಂಘಿಸುತ್ತಿವೆ ಎಂದು ತಿಳಿಸಿದೆ.

ಮಾಧ್ಯಮ ಉದ್ಯಮ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಪುನರ್‌ಪರಿಶೀಲಿಸಲು ಮತ್ತು ಅಗತ್ಯ ಮಾರ್ಗಸೂಚಿಗಳನ್ನು ನೀಡಲು ಮಾಜಿ ಭಾರತದ ಮುಖ್ಯ ನ್ಯಾಯಾಧೀಶ ಅಥವಾ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯೊಂದನ್ನು ಸ್ಥಾಪಿಸುವಂತೆ ಕೋರಿರುವ ಅರ್ಜಿಯು,ದ್ವೇಷ ಭಾಷಣಗಳ ಪ್ರಸಾರದ ಮೂಲಕ ದೇಶಕ್ಕೆ ಬೆಂಕಿಯಿಡುವ ತಾಕತ್ತು ಹೊಂದಿರುವ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಉತ್ತರದಾಯಿತ್ವದ ಕೊರತೆಯನ್ನು ಬೆಟ್ಟುಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ಮಾಧ್ಯಮ ವಿಚಾರಣೆಗಳು,ದ್ವೇಷ ಭಾಷಣ,ಪ್ರಚಾರ ಸುದ್ದಿಗಳು ಮತ್ತು ಪಾವತಿ ಸುದ್ದಿಗಳು ಇವೆಲ್ಲ ಮಾಮೂಲಾಗಿಬಿಟ್ಟಿವೆ ಮತ್ತು ತನ್ಮೂಲಕ ನ್ಯಾಯೋಚಿತ ವಿಚಾರಣೆಯ ಸಂತ್ರಸ್ತರ ಹಕ್ಕುಗಳಿಗೆ ಮತ್ತು ನಿಷ್ಪಕ್ಷ ಮಾಹಿತಿಯ ಹಕ್ಕುಗಳಿಗೆ ಅಡ್ಡಿಯನ್ನುಂಟು ಮಾಡಿವೆ ಎಂದಿರುವ ಅರ್ಜಿಯು,ಯಾವುದೇ ಉತ್ತರದಾಯಿತ್ವವಿಲ್ಲದೆ ವಿದ್ಯುನ್ಮಾನ ಮಾಧ್ಯಮಗಳಿಂದ ಘಟನೆಗಳ ಬೇಕಾಬಿಟ್ಟಿ ವರದಿಗಾರಿಕೆಯನ್ನು ಯಾವುದೇ ರೀತಿಯಲ್ಲಿಯೂ ಅವುಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ ಎನ್ನುವಂತಿಲ್ಲ ಎಂದು ಹೇಳಿದೆ.

                                                                                                                                                

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News