‘ಅತ್ಯುತ್ತಮ ಸಮುದಾಯ ನಾಯಕ’ ಪ್ರಶಸ್ತಿಗೆ ಫಾ.ಪ್ರವೀಣ್ ಮಾರ್ಟಿಸ್ ಆಯ್ಕೆ

Update: 2021-01-25 16:58 GMT

ಮಂಗಳೂರು, ಜ.25: ಮಂಗಳೂರು ಮೂಲದ ಅಂತರಾಷ್ಟ್ರೀಯ ಸಂಸ್ಥೆಯಾದ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಪಾಲಿಸಿಯ (ಐಐಪಿಪಿ) 2020-21ರ ಸಾಲಿನ ‘ಮಂಗಳೂರಿನ ಅತ್ಯುತ್ತಮ ಸಮುದಾಯ ನಾಯಕರು’ ಪ್ರಶಸ್ತಿಗೆ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಆಯ್ಕೆಯಾಗಿದ್ದಾರೆ.

ಮಾನವೀಯ, ಶೈಕ್ಷಣಿಕ, ಆಡಳಿತ ಹಾಗೂ ಸಾರ್ವಜನಿಕ ಒಳಿತಿಗಾಗಿ ನೀಡಿದ ಸೇವೆಗಾಗಿ ಫಾ.ಪ್ರವೀಣ್ ಮಾರ್ಟಿಸ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಗಣರಾಜ್ಯೋತ್ಸವದ ದಿನದ ಮುನ್ನ ದಿನದಂದು ಇಂಟರ್ ನ್ಯಾಷನಲ್ ಓರಿಯಂಟೇಶನ್ ಸೆಂಟರ್ ಮತ್ತು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಪಾಲಿಸಿ ಸಂಸ್ಥಾಪಕ ಅಮೆರಿಕದ ಟೆಕ್ಸಾಸ್ ಹೂಸ್ಟನ್, ಡಲ್ಲಾಸ್‌ನ ಮ್ಯಾಕ್ಸ್ ರಸ್ಕೀನ್ಹಾ ಮತ್ತು ಜೆಸ್ಸಿ ರಸ್ಕಿನ್ಹಾ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ.

‘ಸಂಪೂರ್ಣ ಕುಟುಂಬ ಪ್ರಾಯೋಜಿತ ಘಟಕವಾದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಪಾಲಿಸಿಯು ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರನ್ನು 2020-2021ರ ‘ಅತ್ಯುತ್ತಮ ಸಮುದಾಯ ನಾಯಕ’ ಪ್ರಶಸ್ತಿಗೆ ಆಯ್ಕೆ ಮಾಡಲು ಹೆಮ್ಮೆಯಾಗುತ್ತಿದೆ’ ಎಂದು ಸಂಸ್ಥಾಪಕ ಮ್ಯಾಕ್ಸ್ ರಸ್ಕೀನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಫಾ. ಪ್ರವೀಣ್ ಮಾರ್ಟಿಸ್ ಪರಿಚಯ: ಉಡುಪಿ ಜಿಲ್ಲೆಯ ಶಂಕರ್‌ಪುರದ ಮಧ್ಯಮ ಕುಟುಂಬದಲ್ಲಿ ಜನಿಸಿದ ಫಾ.ಪ್ರವೀಣ್, ಸೊಸೈಟಿ ಆಫ್ ಜೀಸಸ್ ಎಂದು ಕರೆಯಲ್ಪಡುವ ಜೆಸ್ಯೂಟ್ಸ್ ಸೊಸೈಟಿಯ ಅಡಿಯಲ್ಲಿ ಯಾಜಕರಾಗಿ ಸೇರುವ ಮೊದಲು ಉತ್ತಮ ಶೈಕ್ಷಣಿಕ ವೃತ್ತಿಜೀವನ ಹೊಂದಿದ್ದರು. ಅದನ್ನು ತ್ಯಾಗಮಾಡಿ ಯೇಸುಸಭೆಗೆ ಯಾಜಕರಾಗಿ ಸೇರಿ, ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿ ತಮ್ಮ ನಿಸ್ವಾರ್ಥ ಸೇವೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬೆಲ್ಜಿಯಂನ ನಮೂರ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಮತ್ತು ಎಲೆಕ್ಟ್ರೋಕೆಮಿಸ್ಟ್ರಿ ವಿಭಾಗದಿಂದ ರಸಾಯನಶಾಸ್ತ್ರದಲ್ಲಿ ‘ಮಲ್ಟಿವಾಲ್ಡ್ ಕಾರ್ಬನ್ ನ್ಯಾನೊಟ್ಯೂಟಬ್‌ಗಳು: ಲೋಹದ ನ್ಯಾನೊಕ್ರಿಸ್ಟಲ್‌ಗಳಿಂದ ಅಲಂಕರಿಸಲ್ಪಟ್ಟಿದೆ ಮತ್ತು ಲೋಹದ ಮ್ಯಾಟ್ರಿಕ್‌ಗಳಲ್ಲಿ ಸಂಯೋಜಿಸಲ್ಪಟ್ಟಿದೆ’ ಎಂಬ ಶೀರ್ಷಿಕೆಯ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.

ಶಂಕರ್‌ಪುರದ ಸೈಂಟ್ ಜಾನ್ಸ್ ಪ್ರೌಢಶಾಲೆ ಮತ್ತು ಉಡುಪಿಯ ಶಿರ್ವಾದ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಅವರ ಪ್ರಾಥಮಿಕ ಶೈಕ್ಷಣಿಕ ಜೀವನದ ಅಡಿಪಾಯ ಹಾಕಲಾಗಿದೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪಡೆದು, ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ವಿಶ್ಲೇಷಣಾತ್ಮಕ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಮುಗಿಸಿ, ದೆಹಲಿಯ ವಿದ್ಯಾಜ್ಯೋತಿ ಸಂಸ್ಥೆಯಿಂದ ಥಿಯೊಲೊಜಿ, ಪುಣೆಯ ಜ್ಞಾನದೀಪ ವಿದ್ಯಾಪೀಠ ಸಂಸ್ಥೆಯಿಂದ ಫಿಲೋಸಾಫಿ ಹಾಗೂ ಬೆಂಗಳೂರಿನ ಮೌಂಟ್ ಸೈಂಟ್ ಜೋಸೆಫ್ ಯೇಸುಸಭೆಯಿಂದ ನೊವಿಶಿಯೇಟ್ ಪಡೆದಿದ್ದಾರೆ.

ಫಾ.ಮಾರ್ಟಿಸ್ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನ ನಿರ್ದೇಶಕರಾಗಿ, ಸೈಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ರಿಸರ್ಚ್ ಸೂಪರ್‌ವೈಸರ್ ಆಗಿ, ನ್ಯಾಕ್ ಮೌಲ್ಯಮಾಪಕರಾಗಿ ತಮ್ಮ ಸೇವೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News