ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ : ದೂರು

Update: 2021-01-25 17:24 GMT

ಉಪ್ಪಿನಂಗಡಿ : ಗ್ರಾಹಕರ ಸೋಗಿನಲ್ಲಿ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿದ ವ್ಯಕ್ತಿಯೋರ್ವ ನಕಲಿ ಚಿನ್ನವನ್ನು ಅಡವಿರಿಸಿ ಲಕ್ಷಾಂತರ ರೂ. ದೋಚಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಕೇರಳ ನೋಂದಣಿ ಸಂಖ್ಯೆ ಹೊಂದಿದ್ದ ಕಾರೊಂದರಲ್ಲಿ ಆಗಮಿಸಿದ ಈತ ಉಪ್ಪಿನಂಗಡಿಯಲ್ಲಿನ ಸಹಕಾರಿ ಹಣಕಾಸು  ಸಂಸ್ಥೆಗಳಿಗೆ ಗಣ್ಯ ಗ್ರಾಹಕನ ಸೋಗಿನಲ್ಲಿ ಎಂಟ್ರಿ ಕೊಟ್ಟು ತರಾತುರಿಯಲ್ಲಿದ್ದೇನೆಂಬ ಭಾವವನ್ನು ವ್ಯಕ್ತಪಡಿಸಿ ತಾನು ತಂದಿತ್ತ ನಕಲಿ ಚಿನ್ನಾಭರಣವನ್ನು ಅಡಮಾನವಿರಿಸಿ ಸಾಲವಾಗಿ ಹಣವನ್ನು ಕೇಳಿದ್ದಾನೆ. ಈತನಲ್ಲಿದ್ದ ಚಿನ್ನಾಭರಣಗಳು ನೈಜ ಚಿನ್ನಾಭರಣದಂತೆ  ಸಹಜ ತೂಕದ ಆಭರಣಗಳಾಗಿದ್ದು, ಮೇಲ್ನೋಟಕ್ಕೆ ನೈಜ ಚಿನ್ನಾಭರಣಗಳಂತೆ ಕಾಣುತ್ತಿರುವುದರಿಂದ ಚಿನ್ನಾಭರಣ ಪರೀಕ್ಷಕ ಬರುವವರೆಗೆ ಕಾಯದೇ ಸಹಕಾರಿ ಸಂಸ್ಥೆಗಳು ಆತನಿಗೆ ಸಾಲ ರೂಪದಲ್ಲಿ  ಹಣವನ್ನಿತ್ತು  ಕಳುಹಿಸಿಕೊಟ್ಟಿದ್ದವು. ಆತ ಹೋದ ಬಳಿಕ ಬರುವ ಚಿನ್ನಾಭರಣ ಪರೀಕ್ಷಕ ಆಭರಣವನ್ನು ಪರೀಕ್ಷಿಸಿದಾಗಲೇ ಅವುಗಳು ನಕಲಿ ಚಿನ್ನಾಭರಣವೆನ್ನುವುದು ತಿಳಿದಿದ್ದವು. ಆ ವೇಳೆಗೆ ವಂಚಕ ನಾಪತ್ತೆಯಾಗುವುದರೊಂದಿಗೆ ಸಂಸ್ಥೆ ವಂಚನೆಗೆ ಒಳಗಾಗಿತ್ತು. ಉಪ್ಪಿನಂಗಡಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ನಾಲ್ಕು ಸಹಕಾರಿ ಸಂಸ್ಥೆಗಳಿಗೆ ವಂಚಿಸಿರುವ ಈತ ರವಿವಾರ ಶುಭಾರಂಭಗೊಂಡ ಸಹಕಾರಿ ಸಂಸ್ಥೆಗೆ ವಂಚಿಸಲು ಮುಂದಾದಾಗ ಈತನ ವಂಚನ ಪ್ರಕರಣ ಬಯಲಾಗಿದ್ದು, ಈ ವೇಳೆ ಆತ ಪರಾರಿಯಾದ ಎಂದು ದೂರಲಾಗಿದೆ.

ಈತನ ಬಂಧನಕ್ಕೆ ಉಪ್ಪಿನಂಗಡಿ ಎಸೈ ಈರಯ್ಯ ಡಿ. ಎನ್. ನೇತೃತ್ವದ ಪೊಲೀಸರು ಬಲೆ ಬೀಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News