ಮಂಗಳೂರಿನಲ್ಲೂ ಮೊಳಗಿದ ರೈತ ಪರ ಘೋಷಣೆ: ಟ್ರ್ಯಾಕ್ಟರ್ ಜತೆ ಪ್ರಜಾಪ್ರಭುತ್ವ ಪಥಸಂಚಲನ

Update: 2021-01-26 13:56 GMT

ಮಂಗಳೂರು, ಜ.26: ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದಿಲ್ಲಿಯಲ್ಲಿ ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಗೆ ಬೆಂಬಲವಾಗಿ ಮಂಗಳೂರು ನಗರದಲ್ಲೂ ರೈತ ಪರ ಘೋಷಣೆಗಳು ಮೊಳಗಿದವು.

ರೈತರು, ದಲಿತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ದುಡಿಯುವ ವರ್ಗದಿಂದ ನಗರದ ಹೃದಯ ಭಾಗದಲ್ಲಿ ಟ್ರ್ಯಾಕ್ಟರ್ ಜತೆ ಪ್ರಜಾಪ್ರಭುತ್ವ ಪಥ ಸಂಚಲನ ನಡೆಸುವ ಮೂಲಕ ದೇಶದ ರೈತರ ಜತೆ ನಾವಿದ್ದೇವೆ ಎಂಬ ಸಂದೇಶವನ್ನು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೀಡಲಾಯಿತು.

ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ಟ್ರ್ಯಾಕ್ಟರ್ ‌ಗಳ ಜತೆಗೆ ಸಾಗಿದ ಪ್ರಜಾಪ್ರಭುತ್ವ ರ್ಯಾಲಿ ಮಿನಿವಿಧಾನ ಸೌಧದ ಎದುರು ಸಮಾವೇಶಗೊಂಡು ಅಲ್ಲಿ ವಿಚಾರ ಮಂಥನ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡ ರವಿಕಿರಣ ಪುಣಚ, 2ನೆ ಸ್ವಾತಂತ್ರ ಚಳವಳಿಯಾಗಿ ನಡೆಯುತ್ತಿರುವ ಈ ಹೋರಾಟವು ಪ್ರಧಾನಿ ಮೋದಿ ವಿರುದ್ಧದ ಸಂಘರ್ಷವಲ್ಲ. ಬದಲಿಗೆ ಇದು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಜನರ ನಡುವಿನ ಹೋರಾಟವಾಗಿದೆ. ರೈತರು, ಕಾರ್ಮಿಕರು, ದಲಿತರು ಭಾಗವಹಿಸುತ್ತಿರುವ ಈ ಹೋರಾಟದಲ್ಲಿ ಸಾಮಾನ್ಯ ಜನರೂ ಭಾಗವಹಿಸುವುದು ಅನಿವಾರ್ಯ ಎಂದರು.

ಪ್ರಧಾನಿ ಮೋದಿಯವರು ಈ ಶತಮಾನದ ದೊಡ್ಡ ಬ್ರೋಕರ್ ಎಂದು ಟೀಕಿಸಿದ ರವಿಕಿರಣ ಪುಣಚ, ಖಾಸಗೀಕರಣದ ಹೆಸರಿನಲ್ಲಿ ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ಕೇವಲ ರೈತರ ಹೋರಾಟ ಮಾತ್ರವಲ್ಲ, ಪ್ರಜಾಪ್ರಭುತ್ವದ ಉಳಿವಿನ ಹೋರಾಟ ಎಂದರು.

ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಮುಖಂಡ ಯಾದವ ಶೆಟ್ಟಿ ಮಾತನಾಡಿ, ದೇಶದ ಸಂಪತ್ತನ್ನು ಆಳುವವರು ಅಂಬಾನಿ, ಅದಾನಿಗೆ ಮಾರಾಟ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ರೈತ ಹೋರಾಟ ನಡೆಯುತ್ತಿದೆ ಎಂದರು.

ವಿಚಾರ ಮಂಥನವನ್ನುದ್ದೇಶಿಸಿ ಎಐಟಿಯುಸಿ ಮುಖಂಡ ಬಿ. ಶೇಖರ್, ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ವಿಲಿಯಂ ಡಿಸೋಜಾ, ದಲಿತ ಸಂಘಟನೆಯ ಮುಖಂಡ ಚಂದು ಎಲ್., ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ. ಶೆಟ್ಟಿ, ಸಿಐಟಿಯುನ ಬಾಲಕೃಷ್ಣ ಶೆಟ್ಟಿ, ರೈತ ಮುಖಂಡ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಸನ್ನಿ ಡಿಸೋಜಾ, ರೂಪೇಶ್ ರೈ ಮೊದಲಾದವರು ವಾತನಾಡಿದರು.

ನೇತೃತ್ವವನ್ನು ವಿವಿಧ ಸಂಘಟನೆಗಳ ನಾಯಕರಾದ ಸೀತಾರಾಮ ಬೇರಿಂಜ, ಕರುಣಾಕರ, ವಾಸುದೇವ ಉಚ್ಚಿಲ್, ಸೇಸಪ್ಪ, ಕೃಷ್ಣಪ್ಪ ಸಾಲ್ಯಾನ್, ಶಬೀರ್, ಶಾಹುಲ್ ಹಮೀದ್, ಸದಾನಂದ, ಸುಧಾಕರ ಜೈನ್, ವಿಲ್ಸನ್ ಮಿನೇಜಸ್, ಲಾರೆನ್ಸ್ ಕುಟಿನ್ನಾ, ಭರತ್ ಅಮಿನ್, ರಜನಿ ರಾವ್, ಅಶ್ರಫ್ ಕೆ.ಸಿ.ರೋಡ್, ವಿನ್ನಿ ವಿಲ್ಸನ್, ಬಿ.ಕೆ. ಇಮ್ತಿಯಾಝ್, ಮುಹಮ್ಮದ್ ಕುಂಜತ್ತಬೈಲ್, ಮಾಧುರಿ ಬೋಳಾರ್, ಭಾರತಿ ಬೋಳಾರ್, ಹರಿದಾಸ್, ಎಚ್.ವಿ. ರಾವ್, ಯು.ಬಿ. ಲೋಕಯ್ಯ, ಯಶವಂತ ಮರೋಳಿ, ನೇಮಿರಾಜ್, ಅಬೂಬಕರ್ ಬಾವ, ಅಶುಂತಾ ಡಿಸೋಜಾ, ಪ್ರಮೀಳಾ ದೇವಾಡಿಗ, ನೀಲಮ್ಮ, ರಮಣಿ, ಸರ್ಫರಾಜ್, ಪದ್ಮಾವತಿ ಶೆಟ್ಟಿ ಮೊದಲಾದವರು ವಹಿಸಿದ್ದರು.

ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)ಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ವಹಿಸಿದ್ದರು.
ಜಾಥಾ ಹಾಗೂ ವಿಚಾರ ಮಂಥನವನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನಿರ್ವಹಿಸಿದರು. ಸಂತೋಷ್ ಕುಮಾರ್ ಬಜಾಲ್ ವಂದಿಸಿದರು.

ಇದು ಪ್ರಥಮ ಹೋರಾಟವಷ್ಟೆ

ಪ್ರಸ್ತುತ ನಮ್ಮನ್ನಾಳುತ್ತಿರುವ ಆಡಳಿತಗಾರರು ಸ್ವಾತಂತ್ರ ಹೋರಾಟ ಮಾಡಿ ಅಧಿಕಾರ ಹಿಡಿದವರಲ್ಲ. ಬದಲಾಗಿ ಬ್ರಿಟಿಷರ ಗುಲಾಮಗಿರಿ ಮಾಡಿದವರು. ಜಾತ್ಯತೀತ ಹಾಗೂ ಧರ್ಮ ನಿರಾಪೇಕ್ಷ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಲು ಹವಣಿಸುತ್ತಿರುವ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರುತ್ತಿರುವ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇಂದು ನಡೆದ ಹೋರಾಟ ಪ್ರಥಮ ಹೋರಾಟ ಮಾತ್ರ. ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾದ ಜನವಿರೋಧಿ ಸರಕಾರ ಹಾಗೂ ಕಾಯ್ದೆಗಳ ವಿರುದ್ಧ ಹೋರಾಟವನ್ನು ಮುಂದುವರಿಸಬೇಕಾಗಿದೆ.
- ಎಂ. ದೇವದಾಸ್, ರಾಜ್ಯ ಸಂಘಟನಾ ಸಂಚಾಲಕರು, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ)

ರೈತರ ಪರ ಹೋರಾಟ ಮುಂದುವರಿಯಲಿದ್ದು, ಹಗಲು-ರಾತ್ರಿ ಚಳವಳಿಗೆ ಮುಂದಾಗಲು ನಾವೆಲ್ಲಾ ಮಾನಸಿಕವಾಗಿ ಸಿದ್ಧರಾಗಬೇಕಾಗಿದೆ.

- ಮುನೀರ್ ಕಾಟಿಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್‌ಐ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News