​ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವ

Update: 2021-01-26 11:27 GMT

ಪುತ್ತೂರು : ಭಾರತದಲ್ಲಿ ಸಂವಿಧಾನ ರಚನೆಗಾಗಿ ಹಲವಾರು ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಲಾಗಿದ್ದು, ನಮ್ಮ ಸಂವಿಧಾನವು ಜಗತ್ತಿನಲ್ಲೇ ಶ್ರೇಷ್ಠ ಶಾಸನಾತ್ಮಕ ಗ್ರಂಥವಾಗಿದೆ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಹೇಳಿದರು.

ಅವರು 72ನೇ ಗಣರಾಜ್ಯೋತ್ಸವ ಅಂಗವಾಗಿ ಮಂಗಳವಾರ ಪುತ್ತೂರಿನ ಕಿಲ್ಲೆ  ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಬಳಿಕ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ನಮಗೆ ಎಲ್ಲಾ ಹಕ್ಕುಗಳು ಸಂವಿಧಾನದತ್ತವಾಗಿ ಲಭಿಸಿದೆ. ಪ್ರಸ್ತುತ ಸಂವಿಧಾನ ಸೂಚಿಸಿದಂತೆ ಜನರಿಂದಲೇ ಆಯ್ಕೆಯಾದ ಸರ್ಕಾರಗಳು ನಮ್ಮನ್ನು ಆಳುತ್ತಿದೆ. ಸಂವಿಧಾನ ನೀಡಿದ ಎಲ್ಲ ಸವಲತ್ತುಗಳು ಮತ್ತು ಜವಾಬ್ದಾರಿಗಳನ್ನು ನಾವು ಇಂದು ನೆನಪಿಸಿಕೊಳ್ಳಬೇಕು. ನಾವು ಶಾಂತಿಯುತವಾಗಿ ಬದುಕಬೇಕಾದರೆ ಸೈನಿಕರನ್ನು ನೆನಪಿಸಬೇಕು. ಅವರು ದೇಶವನ್ನು ಕಾಪಾಡುತ್ತಾರೆ. ಇದಕ್ಕೆ ಸೇರ್ಪಡೆ ಎಂಬಂತೆ 2020ರಲ್ಲಿ ಹೊಸ ವಾರಿಯರ್ಸ್ ಸಿಕ್ಕಿದ್ದಾರೆ. ಅವರೇ ಕೋವಿಡ್ ವಾರಿಯರ್ಸ್ ಎಂದ ಅವರು, ಕೊರೋನ ಬಂದಾಗ ಸರಕಾರಿ ವ್ಯವಸ್ಥೆಯಲ್ಲಿ ಏನು ಮಾಡಲು ಆಗುತ್ತದೆ ಎಂಬ ನಿರಾಶ ಭಾವದಲ್ಲಿದ್ದ ಜನರಿಗೆ 9 ತಿಂಗಳು ಕೊರೋನ ವಿರುದ್ಧ ಹೋರಾಟ ಮಾಡಲು ಸರಕಾರಿ ಇಲಾಖೆ ತನ್ನದೇ ಆದ ಕೊಡುಗೆಳನ್ನು ನೀಡಿದೆ. ಜನರ ಆರೋಗ್ಯ ರಕ್ಷಿಸುವಲ್ಲಿ ಕೋವಿಡ್ ವಾರಿಯರ್ಸ್ ಆಗಿದ್ದುಕೊಂಡು ಸರಕಾರಿ ಇಲಾಖೆಗಳು ಮಹತ್ತರ ಪಾತ್ರ ವಹಿಸಿವೆ ಎಂದರು.

ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳದಿಂದ ಧ್ವಜವಂದನೆ ಸ್ವೀಕರಿಸಿದ ಬಳಿಕ ಪುರಭವನದಲ್ಲಿ ಸರಳ ಸಭಾ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠಂದೂರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪುತ್ತೂರು ಉಪವಿಭಾಗದ ಡಿವೈಎಸ್‍ಪಿ ಡಾ.ಗಾನಾ ಪಿ. ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳಾಗಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ, ಗ್ರಾಮ ಪಂಚಾಯತ್, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಇಲಾಖೆಯ ತಲಾ ಐವರು ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News