ದೇಶವು ಫ್ಯಾಸಿಸ್ಟ್, ಕಾರ್ಪೊರೇಟ್ ಪಾಳೆಗಾರಿ ದಾಸ್ಯಕ್ಕೆ ಒಳಪಡುವ ಆತಂಕದಲ್ಲಿ: ಪ್ರೊ.ಫಣಿರಾಜ್

Update: 2021-01-26 14:30 GMT

ಉಡುಪಿ, ಜ.26: ಸ್ವಾತಂತ್ರ ಭಾರತದ ಯಾವುದೇ ಕಾಯಿದೆಗಳಲ್ಲಿ ಇಲ್ಲದ ಕಾನೂನಿನ ಮೂಲಕ ನ್ಯಾಯ ಪಡೆಯುವಂತಹ ಅಧಿಕಾರವನ್ನು ಈ ರೈತ ಕಾಯಿದೆಗಳು ಕಿತ್ತುಕೊಳ್ಳಲಿದೆ. ಈ ನ್ಯಾಯಿಕ ಅಧಿಕಾರವನ್ನು ಈಗ ರೈತರಿಂದ ಕಿತ್ತುಕೊಂಡರೆ ಮುಂದೆ ಕಾರ್ಮಿಕರು, ನಾಗರಿಕರಿಂದಲೂ ಕಿತ್ತುಕೊಳ್ಳಲಿದ್ದಾರೆ. ಹೀಗೆ ಇಡೀ ದೇಶವು ಫ್ಯಾಸಿಸ್ಟ್ ಹಾಗೂ ಕಾರ್ಪೊರೇಟ್ ಪಾಳೆಗಾರಿ ದಾಸ್ಯಕ್ಕೆ ಒಳಪಡಲಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.

ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ದೇಶ ವ್ಯಾಪಿ ನಡೆಸುತ್ತಿರುವ ಚಳವಳಿಗೆ ಬೆಂಬಲವಾಗಿ ಉಡುಪಿಯ ಸಾಮಾಹಿಕ ಸಂಘಟನೆಗಳ ಐಕ್ಯ ವೇದಿಕೆಯ ನೇತೃತ್ವದಲ್ಲಿ ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಕಾಲ್ನಡಿಗೆ ಜಾಥದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವು ಮಾತನಾಡುತಿ ದ್ದರು.

ರೈತರ ಪರವಾಗಿ ನ್ಯಾಯ ಸಿಗದಂತೆ ಮಾಡುವ ಮತ್ತು ಕಾರ್ಪೊರೇಟ್ ಪಾಳೆಗಾರಿಕೆಯನ್ನು ತರಲು ಈ ಮೂರು ಕಾಯಿದೆಗಳು ಅಣಿಗೊಳಿಸಲಾಗು ತ್ತಿದೆ. ಹೀಗೆ ಪ್ರಜಾಪ್ರಭುತ್ವ, ನಾಗರಿಕ ಹಾಗೂ ಸಂವಿಧಾನ ವಿರೋಧಿ ಕಾಯಿದೆ ಇದಾಗಿದೆ ಎಂದ ಅವರು, ಸರ್ವಾಧಿಕಾರಿ ಮತ್ತು ಬಂಡವಾಳಶಾಹಿಗಳನ್ನು ರಕ್ಷಿಸುವ ಈ ಕಾಯಿದೆಯು ರಾಜ್ಯದ ಶಾಸನ ಸಭೆಯ ಅಧಿಕಾರವನ್ನೇ ಕಿತ್ತು ಕೊಳ್ಳಲಿದೆ ಎಂದು ದೂರಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ರೈತರ ಬದುಕು ಕಸಿದುಕೊಳ್ಳುವ ಕರಾಳ ಮಸೂದೆಯನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ. ಆದರೆ ಯಾವುದೇ ಕಾರಣಕ್ಕೂ ದೇಶದ ರೈತರು ಈ ಮಸೂದೆಯನ್ನು ಜಾರಿಗೆ ತರಲು ಬಿಡುವುದಿಲ್ಲ. ಜನವಿರೋಧಿ ಕಾಯಿದೆ ವಿರುದ್ಧ ಹೋರಾಟ ಮಾಡುವುದು ನಮ್ಮ ಹಕ್ಕು ಎಂದು ತಿಳಿಸಿದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮತಾನಾಡಿ, ಈ ಕಾಯಿದೆ ಜಾರಿಗೆ ಬಂದರೆ ರೈತರಿಗೆ ಮಾತ್ರವಲ್ಲ ಮಧ್ಯಮ ವರ್ಗದವರಿಗೂ ತೊಂದರೆ ಆಗುತ್ತದೆ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಲಿದೆ. ಆದುದರಿಂದ ಇದು ಕೇವಲ ರೈತರ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶಶಿಧರ ಗೊಲ್ಲ, ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಗಣೇಶ್ ನೆರ್ಗಿ, ಜಿಲ್ಲಾ ಮಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಸಲಾವುದ್ದೀನ್, ಹುಸೈನ್ ಕೋಡಿಬೆಂಗ್ರೆ, ವೆಲ್‌ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಇದ್ರೀಸ್ ಹೂಡೆ, ಪ್ರೊ.ಸಿರಿಲ್ ಮಥಾಯಸ್, ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ, ರಮೇಶ್ ಕಾಂಚನ್, ಶಶಿಧರ ಶೆಟ್ಟಿ ಎರ್ಮಾಳ್, ವಿಶ್ವಾಸ್ ಅಮೀನ್, ಜನರ್ದಾನ ಭಂಡಾರ್ಕರ್, ಯತೀಶ್ ಕರ್ಕೇರ, ಪ್ರಶಾಂತ್ ಜತ್ತನ್ನ, ಡಾ.ಸುನೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಉಡುಪಿಯ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದರೆಗೆ ಕಾಲ್ನಡಿಗೆ ಜಾಥ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News