'338.6 ಕೋಟಿ ರೂ.ವೆಚ್ಚದಲ್ಲಿ ಉಡುಪಿಗೆ ನಿರಂತರ ವಾರಾಹಿ ನೀರು'

Update: 2021-01-26 14:35 GMT

ಉಡುಪಿ, ಜ.26: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನಿರಂತರವಾಗಿ ಕುಡಿಯುವ ನೀರು ಪೂರೈಕೆಗಾಗಿ 338.63 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಾರಾಹಿ ನದಿಯ ನೀರನ್ನು ಮಣಿಪಾಲದ ಜಿಎಲ್‌ಎಸ್‌ಆರ್‌ಗೆ ಸರಬರಾಜು ಮಾಡಲು ಕೈಗೆತ್ತಿಕೊಂಡಿರುವ ಅಮೃತ್ ಹಾಗೂ ಎಡಿಬಿ ನೆರವಿನ ಕ್ವಿಮಿಪ್ ಯೋಜನೆ ಪ್ರಗತಿ ಪಥದಲ್ಲಿದೆ ಎಂದು ರಾಜ್ಯದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ನಗರದ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ದಲ್ಲಿ ಮಾತನಾಡುತಿದ್ದರು.

ಅಲೆವೂರಿನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ 1.77 ಕೋಟಿ ರೂ. ವೆಚ್ಚದಲ್ಲಿ 10ಟಿಪಿಡಿ ಸಾಮರ್ಥ್ಯದ ಎಂಆರ್‌ಎಫ್ ಘಟಕ ನಿರ್ಮಾಣ ಹಾಗೂ ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸ್ವಚ್ಛಭಾರತ್ ಅಭಿಯಾನದಿ 14.41 ಲಕ್ಷ ರೂ.ವೆಚ್ಚದ ಡಿಪಿಆರ್‌ಗೆ ಈಗಾಗಲೇ ಅನುಮೋದನೆ ದೊರೆತಿದೆ. ಇದರಲ್ಲಿ 7.31 ಕೋಟಿ ರೂ.ವೆಚ್ಚದ ಸಿವಿಲ್ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ ಎಂದು ಅಂಗಾರ ತಿಳಿಸಿದರು.

ಪ್ರಧಾನಮಂತ್ರಿ ಆವಾಝ್ ಯೋಜನೆಯಡಿ ವಸತಿರಹಿತ 352 ಅರ್ಜಿದಾರರ ಪೈಕಿ 212 ಅರ್ಹ ಫಲಾನುಭವಿಗಳಿಗೆ ವಸತಿ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಹಲವು ಯೋಜನೆ ಗಳನ್ನು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ರೂಪಿಸಿದ್ದು, ಜಿಲಲೆಯಲ್ಲಿ ಒಟ್ಟು 4 ಹೌಸ್‌ಬೋಟ್ ಹಾಗೂ ಪ್ರಸಕ್ತ ಸಾಲಿನಲ್ಲಿ ಒಟ್ಟು ಐದು ಹೋಮ್‌ಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಆದ್ಯತಾ ಪ್ರವಾಸಿ ಜಿಲ್ಲೆ: 2021-25ನೇ ಪ್ರವಾಸೋದ್ಯಮ ನೀತಿಯಲ್ಲಿ ಕರ್ನಾಟಕ ಸರಕಾರ ಉಡುಪಿ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ತಾಣಗಳ ಜಿಲ್ಲೆಯಾಗಿ ಗುರುತಿಸಿದ್ದು, ಇದು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುತ್ತದೆ. ಕಾಪು ತಾಲೂಕು ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್‌ನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರ ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಅಂಗಾರ ತಿಳಿಸಿದರು.

ಸನ್ಮಾನ: ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವ ಮೂರು ಸರಕಾರಿ ಪ್ರೌಢ ಶಾಲೆಗಳ -ಕಾವಡಿ, ಚಿತ್ತೂರು, ಕಾಳಾವರ- ಮುಖ್ಯಶಿಕ್ಷಕರನ್ನು, ಅದೇ ರೀತಿ ಮೂರು ಪದವಿ ಪೂರ್ವ ಕಾಲೇಜು ಗಳ -ಶಿರ್ಲಾಲು, ಮಿಯ್ಯೌರು, ಬ್ರಹ್ಮಾವರ- ಪ್ರಾಂಶುಪಾಲರುಗಳನ್ನು ಸನ್ಮಾನಿಸಲಾಯಿತು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಸುರಭಿ ಶೆಟ್ಟಿ (624), ಲಕ್ಷ್ಮೀ ಪಿ.ನಾಯ್ಕಿ (623), ಭವ್ಯ ನಾಯಕ್ (622) ಹಾಗೂ ಆದಿತ್ಯ ಶೆಣೈ(622)ರನ್ನು ಅಲ್ಲದೇ ಪಿಯುಸಿಯಲ್ಲಿ ಜಿಲ್ಲೆಗೆ ಅತ್ಯಧಿಕ ಅಂಕಗಳಿಸಿದ ಅಭಿಜ್ಞಾ ರಾವ್, ಬಿ.ರಿಥಿಕಾ ಕಾಮತ್, ಸ್ವಾತಿ ಪೈ, ಗ್ರಿಷ್ಮಾ ಕೆ. ಹಾಗೂ ಮೇಧಾ ಎನ್.ಭಟ್‌ರನ್ನು ಸನ್ಮಾನಿಸಲಾಯಿತು.

ಜಿಲ್ಲಾಮಟ್ಟದಲ್ಲಿ 2018-19ನೇ ಸಾಲಿನ ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದ ಕುಂದಾಪುರ ತಾಲೂಕು ಗೋಳಿಹೊಳೆಯ ಗೋವಿಂದು ಪೂಜಾರ್ತಿ ಅವರಿಗೆ 50,000ರೂ. ನಗದು ಬಹುಮಾನ ದೊಂದಿಗೆ ಸನ್ಮಾನಿಸಲಾಯಿತು.

2020-21ರ ಸಾಲಿನ ಆತ್ಮಯೋಜನೆಯ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ 10 ಮಂದಿಯನ್ನು ತಲಾ 25,000ರೂ., 2019-20ನೇ ಸಾಲಿನ ಕೃಷಿ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಭತ್ತ ಬೆಳೆ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಮೂವರನ್ನು ತಲಾ 30000 ರೂ.ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ದನ್, ಎಡಿಸಿ ಸದಾಶಿವ ಪ್ರಭು, ಕರಾವಳಿ ಕಾವಲು ಪೊಲೀಸ್ ಎಸ್ಪಿ ಚೇತನ್, ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News