ಮುಖ್ಯಮಂತ್ರಿ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ: ಸಚಿವ ಅಂಗಾರ

Update: 2021-01-26 14:43 GMT

ಉಡುಪಿ, ಜ. 26: ಸದ್ಯ ನನಗೆ ಉಡುಪಿ ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ವಹಿಸಿದ್ದಾರೆ. ಈಗಂತಲೂ ನಾನು ಜಿಲ್ಲಾ ಉಸ್ತುವಾರಿ ಸಚಿವನೆಂಬುದನ್ನು ಒಪ್ಪಿಕೊಳ್ಳಲಾಗದು. ನಾನು ಪಕ್ಷ ಸಂಘಟನೆಯಲ್ಲಿ ಬೆಳೆದು ಬಂದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವನಾಗುವಂತೆ ಮುಖ್ಯಮಂತ್ರಿ, ಪಕ್ಷ ಹೇಳಿದರೆ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ನೂತನ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತಿದ್ದರು.

ಈಗಷ್ಟೇ ಮೀನುಗಾರಿಕೆ, ಬಂದರು ಖಾತೆಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದ್ದಾರೆ. ಕೆಲ ದಿನಗಳ ಕಾಲ ಇಲಾಖೆಯ ಕಾರ್ಯವ್ಯಾಪ್ತಿ, ಅಲ್ಲಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ಸಂಪೂರ್ಣ ತಿಳಿದುಕೊಂಡು ಆ ಬಳಿಕ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೇನೆ. ಮೀನುಗಾರರ ಬೇಡಿಕೆ, ಸಮಸ್ಯೆಗಳನ್ನು ಅರಿತುಕೊಂಡು ಕಾರ್ಯಪ್ರವೃತ್ತನಾಗುತ್ತೇನೆ ಎಂದರು.

ಪಕ್ಷ ಸಂಘಟನೆಯ ಅಡಿಯಲ್ಲಿ ನಾನು ಬೆಳೆದು ಬಂದವನು. ನನ್ನನ್ನು ಆರು ಅವಧಿಗೆ ಜನ ಗೆಲ್ಲಿಸಿದ್ದಾರೆ. ಅಧಿಕಾರದ ಹಿಂದೆ ನಾನು ಯಾವತ್ತೂ ಹೋಗಿಲ್ಲ. ಅಧಿಕಾರವೇ ನನ್ನ ಹಿಂದೆ ಬಂದಿದೆ. ಸಚಿವ ಸಂಪುಟದಲ್ಲಿ ಖಾತೆಯ ಕುರಿತಂತೆ ಉಂಟಾಗಿರುವ ಗೊಂದಲವನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ಹಿರಿಯರು ಬಗೆಹರಿಸುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News