ರೈತ ಹೋರಾಟ ಬೆಂಬಲಿಸಿ ಎಸ್‌ವೈಎಸ್‌ನಿಂದ ‘ಫ್ಲ್ಯಾಗ್ ಮಾರ್ಚ್’ ರ್‍ಯಾಲಿ

Update: 2021-01-26 17:15 GMT

ಮಂಗಳೂರು, ಜ.26: ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ಬೆಂಬಲಿಸಿ ಎಸ್‌ವೈಎಸ್ ದ.ಕ. ಜಿಲ್ಲಾ ಪಶ್ಚಿಮ ಸಮಿತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ನಗರದಲ್ಲಿ ‘ಫ್ಲ್ಯಾಗ್ ಮಾರ್ಚ್’ ರ್‍ಯಾಲಿ ಹಮ್ಮಿಕೊಳ್ಳಲಾಯಿತು.

ನಗರದ ಮಿನಿವಿಧಾನಸೌಧ ಆವರಣದಿಂದ ಕ್ಲಾಕ್‌ ಟವರ್‌ವರೆಗೆ ನೂರಾರು ಕಾರ್ಯಕರ್ತರಿಂದ ರ್‍ಯಾಲಿ ನಡೆಯಿತು. ರ್‍ಯಾಲಿಯಲ್ಲಿ ಕಾರ್ಯಕರ್ತರ ಕೈಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸಿದವು. ರ್‍ಯಾಲಿಯಲ್ಲಿ 72 ರಾಷ್ಟ್ರ ಧ್ವಜಗಳನ್ನು ಹಿಡಿದ ನಾಯಕರು, 72 ಎಸ್‌ವೈಎಸ್ ಸಮಿತಿಯ ದ್ವಜ ಹಿಡಿದ ಸಮಿತಿಯ ಸದಸ್ಯರು ಹಾಗೂ 72 ಕಾರ್ಯಕರ್ತರು ಒಟ್ಟು 216 ಮಂದಿ ಪಾಲ್ಗೊಂಡಿದ್ದರು.

ರ್‍ಯಾಲಿ ಉದ್ಘಾಟಿಸಿದ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಕೇಂದ್ರ ಸರಕಾರವು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ದೇಶದ ಬೆನ್ನೆಲುಬು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ದೇಶದ ಎಲ್ಲ ಪ್ರಜೆಗಳು ರೈತರಿಗೆ ಬೆಂಬಲ ನೀಡಬೇಕು. ದೇಶದ ಪ್ರಧಾನಿ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಸರಕಾರ ಕೂಡಲೇ ರೈತರಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಮಾತನಾಡಿ, ಕೇಂದ್ರ ಸುಗ್ರಿವಾಜ್ಞೆ ಮೂಲಕ ತರಲು ಹೊರಟಿರುವ ಕಾಯ್ದೆಗಳು ಕೃಷಿ ರಂಗವನ್ನೇ ಬುಡಮೇಲು ಮಾಡುವಂತಿದೆ. ಕೇಂದ್ರ ಸರಕಾರವು ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದರು.

ದೆಹಲಿಯಲ್ಲಿ ಕಳೆದ ಎರಡು ತಿಂಗಳಿಂದ ಬೀಡು ಬಿಟ್ಟಿರುವ ರೈತರ ಸಮಸ್ಯೆಗಳನ್ನು ಆಲಿಸಬೇಕು. ರೈತವಿರೋಧಿ ಕಾನೂನು ರದ್ದುಗೊಳಿಸಿ, ರೈತರಿಗೆ ಸರಕಾರ ಆಸರೆಯಾಗಬೇಕು. ಸಂವಿಧಾನಬದ್ಧ ದೇಶ ನಮ್ಮದು. ರೈತರು ಕೂಡ ಸಂವಿಧಾನಾತ್ಮಕ ವಾಗಿಯೇ ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಹಲವು ರೈತರು ಮೃತಪಟ್ಟಿದ್ದಾರೆ. ಆದಾಗ್ಯೂ, ಪ್ರತಿಭಟನೆ ಯಶಸ್ಸಿನತ್ತ ಸಾಗುತ್ತಿರುವುದು ರೈತರ ಹುಮ್ಮಸ್ಸಿನ ಪ್ರತೀಕ ಎಂದು ಹೇಳಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ, ರಾಜ್ಯ ಅಧ್ಯಕ್ಷ ಪಿ.ಎಂ. ಉಸ್ಮಾನ್ ಸಅದಿ ಪಟ್ಟೋರಿ, ಎಸ್ಸೆಸ್ಸೆಫ್ ಪಶ್ವಿಮ ಸಮಿತಿಯ ಅಧ್ಯಕ್ಷ ಮುನೀರ್ ಸಖಾಫಿ, ಎಸ್‌ಇಡಿಸಿ ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ, ಬಾವ ಫಕ್ರುದ್ದೀನ್, ಮುನೀರ್ ಸಖಾಫಿ ಉಳ್ಳಾಲ್ ಸೇರಿದಂತೆ ಟೀಮ್ ಇಸಾಬಾ ತಂಡದವರು ಉಪಸ್ಥಿತರಿದ್ದರು. ಕೆ.ಎಚ್. ಇಸ್ಮಾಯಿಲ್ ಸಅದಿ ಕಿರಾಅತ್ ಪಠಿಸಿದರು. ಖಲೀಲ್ ಮುಸ್ಲಿಯಾರ್ ಸ್ವಾಗತಿಸಿದರು. ಸಲೀಂ ಅಡ್ಯಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News