ದಿಲ್ಲಿಯಲ್ಲಿ ಹೆಚ್ಚುವರಿ ಅರೆ ಸೇನಾ ಪಡೆ ನಿಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶ

Update: 2021-01-26 16:10 GMT

ಹೊಸದಿಲ್ಲಿ, ಜ. 26: ಹೊಸದಿಲ್ಲಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಯಲು ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುವರಿ ಅರೆ ಸೇನಾ ಪಡೆಗಳನ್ನು ನಿಯೋಜಿಸಲು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ನಿರ್ಧರಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾತ್ಸವ ಹಾಗೂ ಇಂಟೆಲಿಜೆನ್ಸ್ ಬ್ಯೂರೊ (ಐಬಿ)ದ ನಿರ್ದೇಶಕರನ್ನು ತನ್ನ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ದಿಲ್ಲಿಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲು ಅಮಿತ್ ಶಾ ಅವರು ಆದೇಶಿಸಿದ್ದಾರೆ.

ಗೃಹ ಸಚಿವರು ಬೆಳವಣಿಗೆ ಬಗ್ಗೆ ನಿಕಟ ಗಮನ ಇರಿಸಿದ್ದಾರೆ ಹಾಗೂ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂಸಾತ್ಮಕ ಪ್ರತಿಭಟನಕಾರರು ದೊಡ್ಡ ಸಂಖ್ಯೆಯಲ್ಲಿ ಇರುವ ಪ್ರದೇಶ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗುವುದು. ಐಟಿಒ ಹಾಗೂ ಗಾಝಿಪುರ ಇದರಲ್ಲಿ ಒಳಗೊಂಡಿದೆ. ಸಭೆಯಲ್ಲಿ ಅಮಿತ್ ಶಾ ಅವರು ದಿಲ್ಲಿಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಆದಷ್ಟು ಬೇಗ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಉದ್ದೇಶಕ್ಕಾಗಿ ಸಿಆರ್‌ಪಿಎಫ್ 10 ಕಂಪೆನಿಗಳು ಹಾಗೂ ಅರೆ ಸೇನಾ ಪಡೆಯ 5 ಕಂಪೆನಿಗಳು ದಿಲ್ಲಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News