ಜನವರಿ ಅಂತ್ಯಕ್ಕೆ ಕಂಬಳ ಆರಂಭ : ಸಂಸದ ನಳಿನ್

Update: 2021-01-26 16:12 GMT

ಮಂಗಳೂರು, ಜ. 26: ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚುತಪ್ಪದೇ ಅನುಸರಿಸುವುದರೂಂದಿಗೆ ಆಯೋಜಿಸಬೇಕು ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಬಾರಿ ಕೋವಿಡ್ ಸೋಂಕಿನಿಂದಾಗಿ ರೈತರು ಜನವರಿ ಅಂತ್ಯವಾದರೂ ಪ್ರಾರಂಭಿಸಿಲ್ಲ. ಆಯೋಜಕರು ಕೋವಿಡ್ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುವುದರೊಂದಿಗೆ ಜನವರಿ 31ರಿಂದ ಜಿಲ್ಲೆಯಲ್ಲಿ 10 ಕಂಬಳ ಕಾರ್ಯಕ್ರಮವನ್ನು ಏರ್ಪಡಿಸಬಹುದಾಗಿದೆ ಎಂದರು.

ಕಂಬಳ ಕರಾವಳಿ ಕರ್ನಾಟಕ ಭಾಗದ ಜಾನಪದ ಕ್ರೀಡೆ. ಕರಾವಳಿ ಭಾಗದ ರೈತಾಪಿ ವರ್ಗವು ನವೆಂಬರ್-ಡಿಸೆಂಬರ್ ಮಾಸದಲ್ಲಿ ಭತ್ತದ ಕೊಯ್ಲಿನ ನಂತರದಿಂದ ಫೆಬ್ರವರಿ-ಮಾರ್ಚ್ ತಿಂಗಳವರೆಗೆ ತಮ್ಮ ಮನೋರಂಜನೆಗಾಗಿ ಸಾಂಘಿಕ ಬಲದೂಂದಿಗೆ ಕಂಬಳವನ್ನು ನಡೆಸುತ್ತಾರೆ. ಕಂಬಳಕ್ಕೆ ನೂರಾರು ವರ್ಷದ ಇತಿಹಾಸವಿದ್ದು, ರಾಜಮಹಾರಾಜರು ಪ್ರೋತ್ಸಾಹ ನೀಡಿದ್ದರು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಕೋವಿಡ್ ಸಂದರ್ಭವಾದ ಈ ದಿನಗಳಲ್ಲಿ ಅತಿಹೆಚ್ಚು ಮುಂಜಾಗ್ರತೆ ವಹಿಸಬೇಕು. ಹೆಚ್ಚು ಜನರು ಸೇರಿದಂತೆ ಕ್ರಮ ವಹಿಸಬೇಕು. ರಾತ್ರಿ 10 ಗಂಟೆಯ ಒಳಗಾಗಿ ಕಂಬಳ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕು ಎಂದರು.

ಕಾರ್ಯಕ್ರಮಕ್ಕೆ ವಯಸ್ಸಾದವರು ಮತ್ತು ಮಕ್ಕಳು ಭಾಗವಹಿಸದಂತೆ ಎಚ್ಚರ ವಹಿಸಬೇಕು. ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.

ಕಂಬಳ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ವಿಧಿಸುವ ಎಲ್ಲ ನಿಯಮಗಳನ್ನು ಹಾಗೂ ಎಲ್ಲ ಮಾರ್ಗಸೂಚಿಗಳನ್ನು ಶಿಸ್ತುಬದ್ಧವಾಗಿ ಜರಗಿಸಲು ಹೆಚ್ಚಿನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಯು.ಟಿ. ಖಾದರ್, ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್, ಉಪ ಪೊಲೀಸ್ ಆಯುಕ್ತ ವಿನಯ್ ಗಾವಂಕರ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಟಿ.ಜಿ. ಪ್ರಸನ್ನ ಹಾಗೂ ಕಂಬಳ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News