×
Ad

‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಅರ್ನಬ್ ಗೋಸ್ವಾಮಿ ಲೀಗಲ್ ನೋಟಿಸ್

Update: 2021-01-26 22:12 IST

ಮುಂಬೈ, ಜ.26: ಟಿಆರ್‌ಪಿ ತಿರುಚಲು ತನಗೆ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಲಂಚ ನೀಡಿದ್ದರು ಎಂದು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ ಮಾಜಿ ಸಿಇಒ ಲಿಖಿತ ಹೇಳಿಕೆ ನೀಡಿದ್ದಾರೆಂಬ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಅರ್ನಬ್ ಗೋಸ್ವಾಮಿ ಲೀಗಲ್ ನೋಟಿಸ್ ರವಾನಿಸಿದ್ದಾರೆ ಎಂದು ವರದಿಯಾಗಿದೆ.

‘ಲಂಚ ನೀಡಿದ ಆರೋಪ ಟಿಆರ್‌ಪಿ ಹಗರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದ್ದರೂ ಇದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಹೀಗಿದ್ದರೂ ನೀವು (ಇಂಡಿಯನ್ ಎಕ್ಸ್‌ಪ್ರೆಸ್) ಪತ್ರಿಕೋದ್ಯಮ ನೀತಿಗಳನ್ನು ಉಲ್ಲಂಘಿಸಿ ಓರ್ವ ನ್ಯಾಯಾಧೀಶರಂತೆ, ತೀರ್ಪುಗಾರರಂತೆ, ಗಲ್ಲಿಗೇರಿಸುವವರಂತೆ ವರ್ತಿಸಿದ್ದೀರಿ. ಲೇಖನದ ಶೀರ್ಷಿಕೆ ದುರುದ್ದೇಶಪೂರಿತ ಮತ್ತು ಕುಚೇಷ್ಟೆಯದ್ದಾಗಿದೆ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‌ನ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾರಿಂದ ಮುಂಬೈ ಪೊಲೀಸರು ಒತ್ತಾಯಪೂರ್ವಕವಾಗಿ ಮತ್ತು ಬಲವಂತದಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಹೇಳಿಕೆಯನ್ನು ದಾಸ್‌ಗುಪ್ತ ಕೂಡಾ ನಿರಾಕರಿಸಿದ್ದಾರೆ. ಆದರೂ, ಹೇಳಿಕೆಯನ್ನು ಪುರಾವೆಯಾಗಿ ಪರಿಗಣಿಸಲಾಗದು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿಲ್ಲ. ಈ ಮೂಲಕ ರಿಪಬ್ಲಿಕ್ ಟಿವಿಯ ಘನತೆಗೆ ಕುಂದುಂಟು ಮಾಡಲು ಪತ್ರಿಕೆ ಪ್ರಯತ್ನಿಸುತ್ತಿದೆ. ಪತ್ರಿಕೆಯಲ್ಲಿ ಪ್ರಕಟವಾದ ಕುತ್ಸಿತ, ದ್ವೇಷಫೂರ್ಣ ವರದಿ ನಮ್ಮ ಕಕ್ಷೀದಾರರ ವಿರುದ್ಧ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ನಡೆಸುತ್ತಿರುವ ಪ್ರತಿಕೂಲ ಅಭಿಯಾನದ ಭಾಗವಾಗಿದ್ದು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಘನತೆಗೆ ಸರಿಪಡಿಸಲಾಗದಷ್ಟು ಹಾನಿಯೆಸಗಿದೆ’ ಎಂದು ಲೀಗಲ್ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 24 ಗಂಟೆಯೊಳಗೆ ಬೇಷರತ್ ಕ್ಷಮೆ ಯಾಚಿಸಬೇಕು ಮತ್ತು ರಿಪಬ್ಲಿಕ್ ಟಿವಿ ಚಾನೆಲ್‌ನ ವಿರುದ್ಧ ಸುಳ್ಳು ಮತ್ತು ಆಧಾರರಹಿತ ವರದಿ ಪ್ರಕಟಿಸುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News