×
Ad

ನಾನು 9,850 ಕೋಟಿ ರೂ. ಮೌಲ್ಯದ ಅರಮನೆ ಹೊಂದಿಲ್ಲ: ಪುಟಿನ್

Update: 2021-01-26 22:43 IST

ಮಾಸ್ಕೋ (ರಶ್ಯ), ಜ. 26: ತಾನು ಕಪ್ಪು ಸಮುದ್ರದಲ್ಲಿ 1.35 ಬಿಲಿಯ ಡಾಲರ್ (ಸುಮಾರು 9,850 ಕೋಟಿ ರೂಪಾಯಿ) ಮೌಲ್ಯದ ವಿಲಾಸಿ ಅರಮನೆಯೊಂದನ್ನು ಹೊಂದಿದ್ದೇನೆ ಎಂಬ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ಆರೋಪವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ನಿರಾಕರಿಸಿದ್ದಾರೆ.

ಪುಟಿನ್ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಡುವಂತೆ ಕಳೆದ ವಾರ ತನ್ನ ಬೆಂಬಲಿಗರಿಗೆ ನವಾಲ್ನಿ ಕರೆ ನೀಡಿದ್ದರು. ಇದೇ ಸಂದರ್ಭದಲ್ಲಿ, ಕಪ್ಪು ಸಮುದ್ರದ ತೀರದಲ್ಲಿ ಪುಟಿನ್ ಹೊಂದಿದ್ದಾರೆನ್ನಲಾದ ಭವ್ಯ ಅರಮನೆಯ ಬಗ್ಗೆ ನಡೆಸಲಾಗಿರುವ ಎರಡು ಗಂಟೆಗಳ ತನಿಖಾ ವರದಿಯೊಂದನ್ನೂ ಅವರು ಬಿಡುಗಡೆಗೊಳಿಸಿದ್ದರು.

ನವಾಲ್ನಿಯನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಶ್ಯಾದ್ಯಂತ ಶನಿವಾರ ನಡೆದ ಧರಣಿಯಲ್ಲಿ ದಾಖಲೆ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು ಹಾಗೂ ಪೊಲೀಸರು ದಾಖಲೆ ಸಂಖ್ಯೆಯ ಧರಣಿನಿರತರನ್ನು ಬಂಧಿಸಿದ್ದಾರೆ.

ನವಾಲ್ನಿಯ ವೀಡಿಯೊದಲ್ಲಿ ತೋರಿಸಲಾಗಿರುವ ಬಂಗಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪುಟಿನ್ ಸೋಮವಾರ ಹೇಳಿದ್ದಾರೆ. ನವಾಲ್ನಿಯ ವೀಡಿಯೊವನ್ನು 8.6 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈ ಭವ್ಯ ಅರಮನೆಯಲ್ಲಿ ಐಸ್ ಸ್ಕೇಟಿಂಗ್ ಮಾಡುವ ಭೂಗತ ಐಸ್ ರಿಂಕ್‌ನಿಂದ ಹಿಡಿದು ಕ್ಯಾಸಿನೊ (ಜುಗಾರಿ ಅಡ್ಡೆ)ವರೆಗೆ ಎಲ್ಲ ಸೌಕರ್ಯಗಳಿವೆ ಎಂದು ನವಾಲ್ನಿಯ ವೀಡಿಯೊ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News