ಹುತಾತ್ಮ ಯೋಧನ ಪತ್ನಿಗೆ ವಂಚನೆ ಆರೋಪ: ದೂರು

Update: 2021-01-27 10:55 GMT

ಮಂಗಳೂರು, ಜ. 27: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್)ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹುತಾತ್ಮ ಉದಯ ಕುಮಾರ್ ಎಂಬವರ ಪತ್ನಿಗೆ ರೇಖಿಗುರು ಚಿಕಿತ್ಸೆ ನೆಪದಲ್ಲಿ ಮೋಸ ವಂಚನೆ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದ್ದು, ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ವಿವಿಧ ಸಂಘಟೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ, ಬರ್ಕೆ ಫ್ರೆಂಡ್ಸ್, ದೇರೆಬೈಲು ಕೊಂಚಾಡಿ ಯುವಕ ಮಂಡಲ, ಜನಶಕ್ತಿ ಸೇವಾ ಟ್ರಸ್ಟ್, ಪಿ.ಎಸ್. ವಿಲ್ಲಿ, ವಿಲ್ಸನ್ ಮತ್ತು ಬೊಲ್ಪುಗುಡಡೆ ನಿವಾಸಿಗಳ ಹೋರಾಟ ಸಮಿತಿಯ ಪರವಾಗಿ ಹೋರಾಟ ಸಮಿತಿಯ ಸಂಚಾಲಕರಾದ ಬಿ. ವಿಷ್ಣುಮೂರ್ತಿ ಮಾಹಿತಿ ನೀಡಿದರು.

ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಉದಯ ಕುಮಾರ್ 2006ರ ಆಗಸ್ಟ್ 2ರಂದು ಹುತಾತ್ಮರಾಗಿದ್ದು, ಅವರ ಪತ್ನಿ ವಸಂತಿ ಯವರು ಪತಿಯ ಪರಿಹಾರದ ಹಣದಿಂದ ಹೆತ್ತವರ ನಾಲ್ಕು ಸೆಂಟ್ಸ್ ಜಾಗಲ್ಲಿ ಮನೆ ಕಟ್ಟಿ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿ ಅದರ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು. ಈ ಸಂದರ್ಭ ಅವರ ಮನೆಗೆ ಬಾಡಿಗೆಗೆ ವಾಸ ಮಾಡಲು ಬಂದ ಸುನಿಲ್ ಕುಮಾರ್ ಹಾಗೂ ಮಮತಾ ದಂಪತಿ ಬಾಡಿಗೆಯ ಕರಾರು ಪತ್ರ ಮಾಡಿಸುವ ನೆಪದಲ್ಲಿ ಮನೆಯ ಮಹಡಿಯ ಹಕ್ಕನ್ನು ತಮ್ಮ ಹೆಸರಿಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದರು. ಇದಲ್ಲದೆ ಸುನಿಲ್ ಕುಮಾರ್ ಮಾಟ, ಮಂತ್ರವಾದಿ ಯಾಗಿಯೂ ಗುರುತಿಸಿಕೊಂಡಿದ್ದು, ಈತ ವಸಂತಿಯವರ ಅನಾರೋಗ್ಯವನ್ನು (ಹೈಪರ್ ಥೈರಾಯ್ಡಾ) ಮುಂದಿಟ್ಟುಕೊಂಡು ಅವರಿಂದ ಐದು ಪವನಿನ ಎರಡು ಬಂಗಾರದ ಬಳೆ ಹಾಗೂ ನಗದು ಹಣನ್ನೂ ಪಡೆದು ಮೋಸ ಮಾಡಿದ್ದಾನೆ. ವಸಂತಿಯವರ ಕಾಯಿಲೆಯನ್ನು ಆಸ್ಪತ್ರೆಗೆ ಹೋಗದೆ ಗುಣಪಡಿಸುವುದಾಗಿ ನಂಬಿಸಿದಲ್ಲದೆ, ವಸಂತಿಯವರ ಹೆಸರಿನಲ್ಲಿ ಬ್ಯಾಂಕ್ ಸಾಲ ಮಾಡಿ ತನ್ನ ಮನೆ ರಿಪೇರಿ ಮಾಡಿಸಿಕೊಂಡಿದ್ದಾನೆ ಮಾತ್ರವಲ್ಲದೆ 2016ರಿಂದ ಈವರೆಗೆ ಮನೆ ಬಾಡಿಗೆಯನ್ನೂ ನೀಡದೆ ಸತಾಯಿಸಿ ದ್ದಾನೆ. ಇತ್ತೀಚೆಗೆ ಅವರ ದೂರದ ಸಂಬಂಧಿ ನಿವೃತ್ತ ಸರಕಾರಿ ನೌಕರರ ಸುಂದರ ಕುಲಾಲ್ ಎಂಬವರ ಮೂಲಕ ನಮ್ಮ ಸಂಘಟನೆಗಳಿಗೆ ಮಾಹಿತಿ ದೊರಕಿದ ಬಳಿಕ ವಸಂತಿ ಪರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದಾಗಿ ವಿಷ್ಣುಮೂರ್ತಿ ವಿವರಿಸಿದರು.

ವಸಂತಿಯವರಿಗೆ ಆಗಿರುವ ಅನ್ಯಾಯದ ಕುರಿತು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಮಾನವ ಹಕ್ಕುಗಳ ಆಯೋಗ ಮಾತ್ರವಲ್ಲದೆ ಸಿಆರ್‌ಪಿಎಫ್‌ಗೂ ದೂರು ನೀಡಲಾಗಿದೆ. ಈ ನಡುವೆ ಕಳೆದ ನವೆಂಬರ್ 20ರಂದು ಸುನಿಲ್ ಮತ್ತು ಆತನ ಪತ್ನಿ ವಸಂತಿಯವರ ಮನೆಗೆ ಪ್ರವೇಶಿಸಿ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ವಸಂತಿಯರ ಅತ್ಯಾಚಾರಕ್ಕೂ ಯತ್ನಿಸಲಾಗಿದೆ. ಆ ಸಂದರ್ಭ ತಾಯಿಯ ರಕ್ಷಣೆಗೆ ಬಂದಿದ್ದ ಮಕ್ಕಳ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ಸುನಿಲ್ ಹಾಗೂ ಆತನ ಪತ್ನಿ ದೂರು ನೀಡಿದ್ದಾರೆ ಎಂದು ವಿಷ್ಣುಮೂರ್ತಿ ಹೇಳಿದರು.
ಹುತಾತ್ಮ ಯೋಧನ ಪತ್ನಿ ಹಾಗೂ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸಂಬಂಧಪಟ್ಟವರು ಸರಿಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೆರೆಮನೆಯವರು, ಸಾಮಾಜಿಕ ಹೋರಾಟಗಾರರು ಸೇರಿ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು, ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಹೋರಾಟವನ್ನು ನಡೆಸುವುದಾಗಿ ಅವರು ಹೇಳಿದರು.
ಗೋಷ್ಠಿಯಲ್ಲಿ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ುಂದರ ಕುಲಾಲ್ ಉಪಸ್ಥಿತರಿದ್ದರು.

ನನ್ನ ಅಸಹಾಯಕತೆ, ಅನಾರೋಗ್ಯವನ್ನೇ ಬಳಸಿ ಮೋಸ

2006ರಲ್ಲಿ ನನ್ನ ಪತಿ ಹುತಾತ್ಮರಾದಾಗ ನಾನು ಅಕ್ಷರಶ: ಕುಗ್ಗಿ ಹೋಗಿದ್ದೆ, ಮಾನಸಿಕವಾಗಿ ಜರ್ಝರಿತವಾಗಿದ್ದೆ. ಆಸ್ಪತ್ರೆಗೂ ದಾಖಲಾಗಿದ್ದೆ. ಇದಲ್ಲದೆ, ನನಗೆ ಅನಾರೋಗ್ಯ ಸಮಸ್ಯೆಯೂ ನನ್ನನ್ನು ಕಂಗೆಡಿಸಿತ್ತು. ಇಂತಹ ಸಂದರ್ಭದಲ್ಲಿ ನನ್ನದೇ ಜಾತಿಯವರು ಎಂಬ ಕಾರಣಕ್ಕೆ ಮನೆಯಲ್ಲಿ ಬಾಡಿಗೆ ನೀಡಿ ಮೋಸ ಹೋದೆ. ನನ್ನ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ನನ್ನ ಮನೆಯ ಮೇಲಿನ ಭಾಗವನ್ನೇ ನನಗೆ ತಿಳಿಯದಂತೆ ತನ್ನ ಹೆಸರಿಗೆ ಸುನಿಲ್ ಹಾಗೂ ಆತನ ಪತ್ನಿ ಮಾಡಿಸಿಕೊಂಡರೂ ನನಗೆ ತಿಳಿಯಲಿಲ್ಲ. ನನ್ನ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದನ್ನು ನಂಬಿ ನಾನು ಮೋಸ ಹೋದೆ. ನನ್ನಂತೆ ಬಹಳಷ್ಟು ಹೆಣ್ಣು ಮಕ್ಕಳಿಗೆ ಆತ ಮೋಸ ಮಾಡಿದ್ದಾನೆ. ಗಂಡ ಸತ್ತ ಮೇಲೆ ಹೆಣ್ಣು ಮಕ್ಕಳು ಯಾರ ಮೇಲೂ ದಯೆ ದಾಕ್ಷಿಣ್ಯ ತೋರಿಸಬಾರದು. ನನಗಾದ ಪರಿಸ್ಥಿತಿ ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗದಿರಲಿ ಎಂದು ಪತ್ರಿಕಾಗೋಷ್ಠಿಯಲ್ಲಿ ವಸಂತಿಯವರು ಕಣ್ಣೀರು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News