ಗ್ರೀನ್ ಟ್ಯಾಕ್ಸ್ ಪ್ರಸ್ತಾಪ : ಆಟೋಮೊಬೈಲ್ ವಲಯದ ಷೇರು ಮೌಲ್ಯದಲ್ಲಿ ಇಳಿಕೆ

Update: 2021-01-27 13:02 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಮಾಲಿನ್ಯಕ್ಕೆ ಕಾರಣವಾಗುವ ಹಳೆಯ ವಾಹನಗಳ ಮೇಲೆ ಹೆಚ್ಚುವರಿ  ತೆರಿಗೆ ವಿಧಿಸುವ ಹಾಗೂ ಎಲ್ಲಾ ವಾಹನಗಳಿಗೆ ಅವುಗಳು ಬಳಸುವ ಇಂಧನದ ಆಧಾರದಲ್ಲಿ ಗ್ರೀನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆಗೆ  ರಸ್ತೆ ಸಾರಿಗೆ ಸಚಿವಾಲಯ ಸೋಮವಾರ ಅನುಮೋದನೆ ನೀಡಿದ ಬೆನ್ನಲ್ಲೇ ಆಟೊಮೊಬೈಲ್ ತಯಾರಿಕಾ ಕಂಪೆನಿಗಳ ಷೇರು ಮೌಲ್ಯಗಳು ಕುಸಿದಿವೆ. ಷೇರು ಪೇಟೆಯ ನಿಫ್ಟಿ ಆಟೋ ಸೂಚ್ಯಂಕದಲ್ಲಿ ಸರಾಸರಿ ಇಳಿಕೆ ಶೇ. 2ರಷ್ಟಾಗಿತ್ತು. ಗರಿಷ್ಠ ಷೇರು ಮೌಲ್ಯ ಇಳಿಕೆ ಅಶೋಕ್ ಲೇಲ್ಯಾಂಡ್ ಕಂಡಿದೆ. ಅದರ ಷೇರು ಮೌಲ್ಯ ಶೇ 3ರಷ್ಟು ಕುಸಿತ ಕಂಡು ರೂ. 113 ತಲುಪಿದೆ. ಅಂತೆಯೇ ಟಾಟಾ ಮೋಟಾರ್ಸ್, ಭಾರತ್ ಫೋರ್ಜ್, ಬಾಲಕೃಷ್ಣ ಇಂಡಸ್ಟ್ರೀಸ್ ಬೋಸ್ಚ್, ಎಂಆರ್‍ಎಫ್, ಮದರ್ಸನ್ ಸುಮಿ ಹಾಗೂ ಅಮರ ರಾಜ ಬ್ಯಾಟರೀಸ್ ಸಂಸ್ಥೆಗಳ ಷೇರು ಬೆಲೆ ಕೂಡ ಶೇ 0.7ರಿಂದ ಶೇ 2.6ರಷ್ಟು ಕುಸಿತ ಕಂಡಿದೆ.

ಸರಕಾರದ ಗ್ರೀನ್ ಟ್ಯಾಕ್ಸ್ ಎಲ್ಲಾ ವಾಹನಗಳಿಗೆ ಅನ್ವಯವಾಗುವುದಾದರೂ ಹೈಬ್ರಿಡ್, ಇಲೆಕ್ಟ್ರಿಕ್ ಹಾಗೂ ಇಥೆನಾಲ್ ವಾಹನಗಳಿಗೆ ಈ ತೆರಿಗೆಯಿಂದ ವಿನಾಯಿತಿ ದೊರೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

ಹದಿನೈದು ವರ್ಷಕ್ಕಿಂತ ಹಳೆಯ ಖಾಸಗಿ ವಾಹನಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದಾದರೆ, ಎಂಟು ವರ್ಷಕ್ಕಿಂತಲೂ ಹಳೆಯ ವಾಹನಗಳು ತಮ್ಮ  ಫಿಟ್ನೆಸ್ ಪ್ರಮಾಣಪತ್ರ ನವೀಕರಣ ಸಂದರ್ಭ ಅಗತ್ಯ ಮಾನದಂಡಗಳನ್ನು ಪೂರೈಸದೇ ಇದ್ದಲ್ಲಿ  ಅವುಗಳಿಗೂ ಹೆಚ್ಚಿನ ತೆರಿಗೆ ವಿಧಿಸಲಾಗುವುದು.

ಗ್ರೀನ್ ಟ್ಯಾಕ್ಸ್ ಮೂಲಕ ಸಂಗ್ರಹವಾದ ಆದಾಯವನ್ನು ಮಾಲಿನ್ಯ ನಿಯಂತ್ರಣಕ್ಕೆ ಬಳಸುವ ಉದ್ದೇಶವಿದೆ.

ಇತ್ತೀಚೆಗಷ್ಟೇ ಆಟೋ ವಲಯದ ಷೇರುಗಳು ಏರಿಕೆ ಕಂಡಿದ್ದವಲ್ಲದೆ ಟಾಟಾ ಮೋಟಾರ್ಸ್ ಷೇರು ಬೆಲೆ 52 ವಾರಗಳಲ್ಲಿಯೇ ಗರಿಷ್ಠ ಮೊತ್ತ ರೂ. 307ಕ್ಕೆ ಜನವರಿ 22ರಂದು ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News