ಪಡುಕೆರೆ ಮರೀನಾ ಯೋಜನೆ ಕೈಬಿಡಲು ಸ್ಥಳೀಯರ ಪಟ್ಟು: ಉಡುಪಿ ಶಾಸಕ ಕೆ.ರಘುಪತಿ ಭಟ್‌ಗೆ ನಿರ್ಣಯದ ಪ್ರತಿ ಸಲ್ಲಿಕೆ

Update: 2021-01-27 13:46 GMT

ಮಲ್ಪೆ, ಜ.27: ಪಡುಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮರೀನಾ ಯೋಜನೆ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಮಲ್ಪೆ ಪಡುಕೆರೆ ಗ್ರಾಮಸ್ಥರು ಮಂಗಳವಾರ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರನ್ನು ಒತ್ತಾಯಿಸಿದ್ದಾರೆ.

ಪಡುಕೆರೆಯಲ್ಲಿ ಶಾಸಕರೊಂದಿಗೆ ನಡೆದ ಮುಖಾಮುಖಿ ಚರ್ಚೆಯಲ್ಲಿ ಮರೀನಾ ಯೋಜನೆ ವಿರೋಧಿಸಿ ಸ್ಥಳೀಯರು ಕೈಗೊಂಡ ನಿರ್ಣಯ ಪ್ರತಿ ಯನ್ನು ಶಾಸಕರಿಗೆ ನೀಡಲಾಯಿತು. ಬಳಿಕ ನಡೆದ ಚರ್ಚೆಯಲ್ಲಿ ಗ್ರಾಮಸ್ಥರನ್ನು ಮನವೊಲಿಸುವ ಶಾಸಕರ ಪ್ರಯತ್ನ ವಿಫಲವಾಯಿತು. ಯಾವುದೇ ಕಾರಣಕ್ಕೂ ಮರೀನಾ ಇಲ್ಲಿಗೆ ತರಬಾರದು ಎಂದು ಸ್ಥಳೀಯರು ಶಾಸಕರ ಮುಂದೆ ಪಟ್ಟು ಹಿಡಿದರು.

ಹಿರಿಯ ಮೀನುಗಾರ ರಾಮ ಕಾಂಚನ್ ಮಾತನಾಡಿ, ಮರೀನಾದಿಂದ ಅಳಿವೆ ಭಾಗದಲ್ಲೂ ಸಮಸ್ಯೆ ಉಂಟಾಗಿ, ಮೀನುಗಾರಿಕೆ ಬಂದರಿಗೂ ಹೊಡೆತ ಬೀಳುವ ಸಾಧ್ಯತೆ ಇದೆ. ಇಲ್ಲಿಗೆ ಮರೀನಾ ತಂದು ಮೀನುಗಾರ ಬುಡಕ್ಕೆ ಕೊಡಲಿ ಏಟು ನೀಡಿ, ಬದುಕನ್ನು ಕಸಿುುವುದು ಬೇಡ ಎಂದು ಹೇಳಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಮರೀನಾ ಯೋಜನೆ ಮಂಜೂ ರಾಗಿಲ್ಲ. ಇಲ್ಲಿ ಮರೀನಾ ನಿರ್ಮಾಣವಾದರೂ ಯಾವುದೇ ಐಷರಾಮಿ ಹೋಟೆಲ್, ಕ್ಲಬ್, ಪಬ್, ಬಾರ್‌ಗಳು ಬರುವುದಿಲ್ಲ. ಆದಕ್ಕೆ ಬೇಕಾಗದ ಸಿಆರ್‌ಝಡ್ ಅನುಮತಿಯೂ ಸಿಗುವುದಿಲ್ಲ. ಆ ಬಗ್ಗೆ ಯೋಚಿಸುವುದು ಬೇಡ. ಮೀನುಗಾರಿಕೆಗೆ ಸಮಸ್ಯೆಯಾಗದ ರೀತಿಯಲ್ಲಿ ವರದಿ ಇದ್ದರೇ ಮರೀನಾ ನಿರ್ಮಾಣದಿಂದ ಜಿಲ್ಲೆ ಮತ್ತು ರಾಜ್ಯದ ಆರ್ಥಿಕೆಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಸದಸ್ಯ ರಾಜೇಂದ್ರ ಪಂದುಬೆಟ್ಟು, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ಹಿರಿಯರಾದ ಶಿವರಾಮ ಪುತ್ರನ್ ಮೊದಲಾದವರು ಹಾಜರಿದ್ದರು. ಪ್ರಕಾಶ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಮ್ಮ ಹಿರಿಯರೇ ನಮಗೆ ತಜ್ಞರು

ಯಾವುದೇ ತಜ್ಞರು ಬಂದು ಇಲ್ಲಿನ ಪರಿಶೀಲನೆ ನಡೆಸಿ ವರದಿ ನೀಡುವುದು ಬೇಡ. ಹಲವಾರು ದಶಕದಿಂದ ಸಮುದ್ರದ ಮೀನು ಗಾರಿಕೆಯಲ್ಲಿ ಸಾಕಷ್ಟು ಅನುಭವವನ್ನು ಪಡೆದ ನಮಗೆ ನಮ್ಮ ಹಿರಿಯರೇ ತಜ್ಞರು. ತತ್‌ಕ್ಷಣ ಈ ಯೋಜನೆಯನ್ನು ನಿಲ್ಲಿಸಬೇಕು ಎಂದು ಸ್ಥಳೀಯರಾದ  ಭುವನ್ ಕೋಟ್ಯಾನ್ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ಈ ಬಗ್ಗೆ ನಾವು ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಪ್ರವಾಸೋಧ್ಯಮ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಾವು ಸಮಿತಿ ಸದಸ್ಯರಾಗಿದ್ದೇವೆ. ಈ ಬಗ್ಗೆ ಸಭೆ ನಡೆಸಿ ಸ್ಥಳೀಯರು ಕೈಗೊಂಡ ನಿರ್ಣಯದ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News