ಇವತ್ತು ಹಂಪನಾ, ನಾಳೆ ನಮ್ಮನ್ನೂ ಪೊಲೀಸ್ ಠಾಣೆಗೆ ಕರೆಸಬಹುದು : ಡಾ.ಪೂರ್ಣಿಮಾ

Update: 2021-01-27 14:03 GMT

ಉಡುಪಿ, ಜ.27: ಸಮಾಜ, ಸಮುದಾಯ, ದೇಶಕ್ಕೆ ಕಷ್ಟ ಎದುರಾದರೆ ಸಾಹಿತಿ, ಸಾಹಿತ್ಯ ಸ್ಪಂದಿಸಬೇಕು. ಪೊಲೀಸ್ ಠಾಣೆಗೆ ಇವತ್ತು ಹಂಪನಾ, ನಾಳೆ ವೈದೇಹಿ, ನಾಡಿದ್ದು ನನ್ನನ್ನೂ ಕರೆಸಬಹುದು. ಆದರೆ ಅದೆಲ್ಲವನ್ನೂ ಮೆಟ್ಟಿನಿಲ್ಲುವ ತಾಕತ್ತು ತೋರಬೇಕು ಎಂದು ಪತ್ರಕರ್ತೆ ಡಾ. ಆರ್.ಪೂರ್ಣಿಮಾ ಹೇಳಿದ್ದಾರೆ.

ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಸರಸ್ವತಿ ಬಾಯಿ ರಾಜವಾಡೆ ವೇದಿಕೆ ಯಲ್ಲಿ ಮಂಗಳವಾರ ನಡೆದ ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ಪ್ರಜಾಪ್ರಭುತ್ವದ ಮೌಲ್ಯ, ಹಕ್ಕು, ಸ್ವಾತಂತ್ರ್ಯದ ಮೇಲೆ ಯಾವುದೇ ಆಡಳಿತ ಪಕ್ಷ ತನ್ನ ಅಜೆಂಡಾಕ್ಕೆ ತಕ್ಕಂತೆ ದಾಳಿ, ಹಲ್ಲೆ ನಡೆಸಿದರೂ ಸಮಾಜದ ಕಾವಲು ಪಡೆಯಾಗಿ ಸಾಹಿತಿಗಳು, ಪತ್ರಕರ್ತರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹರಿಶ್ಚಂದ್ರ ಹೆಬ್ಬಾರ್(ರಂಗಭೂಮಿ), ಗಣಪತಿ ಆಚಾರ್ಯ ಶಂಕರಪುರ(ಲೋಹ ಶಿಲ್ಪಿ), ಕೈರಬೆಟ್ಟು ವಿಶ್ವನಾಥ ಭಟ್ (ಧಾರ್ಮಿಕ), ಇರ್ಮಾಡಿ ತಿಮ್ಮಪ್ಪ ಹೆಗ್ಡೆ (ಸಹಕಾರಿ), ವರಮಹಾಲಕ್ಷ್ಮಿ ಹೊಳ್ಳ (ಸಾಹಿತ್ಯ), ಡಾ.ಪುಷ್ಪ ಗಂಧಿ(ವೈದ್ಯಕೀಯ), ಡಾ.ಭಾರ್ಗವಿ ಐತಾಳ್(ಸಮಾಜ ಸೇವೆ), ಕಲಾವತಿ ದಯಾನಂದ(ಗಾಯನ), ರೆ.ಫಾ.ಕ್ಲೆಮೆಂಟ್ ಮಸ್ಕರೇನಸ್ (ಧಾರ್ಮಿಕ), ಸವೋತ್ತಮ ಗಾಣಿಗ(ಯಕ್ಷಗಾನ), ರಘು ಪಾಂಡೇಶ್ವರ (ಚಲನ ಚಿತ್ರ), ರವಿ ಬಸ್ರೂರು(ಸಂಗೀತ ನಿರ್ದೇಶನ), ಎಂ.ಇಸ್ಮಾಯಿಲ್ ಹೂಡೆ (ಸಮಾಜ ಸೇವೆ), ಆಸ್ಟ್ರೋ ಮೋಹನ್(ಪತ್ರಿಕಾ ಛಾಯಾಗ್ರಾಹಕ), ಜೇಮ್ಸ್ ವಾಜ್(ಕಲಾವಿದ), ರಾಜ್ ಕೊಠಾರಿ (ಚಲನಚಿತ್ರ), ಶೀನ ಪಾಣ (ಜಾನಪದ), ಸಂಚಲನ ಹೊಸೂರು, ಯಕ್ಷಗಾನ ಕಲಾರಂಗ ಕಾರ್ಕಳ, ಪಂಚವರ್ಣ ಯುವಕ ಮಂಡಲ ಕೋಟ(ಸಂಘ ಸಂಸ್ಥೆ) ಇದರ ಪ್ರಮುಖರನ್ನು ಶ್ರೀಕ್ಷೇತ್ರ ಅಮೃತೇಶ್ವರಿ ದೇವಳದ ಧರ್ಮದರ್ಶಿ ಆನಂದ ಸಿ.ಕುಂದರ್ ಸನ್ಮಾನಿಸಿದರು.

ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ವೈದೇಹಿ ಮತ್ತು ಶ್ರೀನಿವಾಸಮೂರ್ತಿ ದಂಪತಿ ಯನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕ ಗಳಿಸಿದ ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ಶೆಟ್ಟಿಗಾರ್ ಅವರನ್ನು ಸನ್ಮಾನಿಸ ಲಾಯಿತು.

ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ, ಜ್ಯೋತಿ ಗುರುಪ್ರಸಾದ್, ನಾರಾಯಣ ಮಡಿ, ವಲೇರಿಯನ್ ಮಿನೇಜಸ್, ಮೋಹನ ಉಡುಪ ಹಂದಾಡಿ, ಪ್ರಭಾಕರ ಶೆಟ್ಟಿ, ಗಣೇಶ ಜಿ., ಭುವನಪ್ರಸಾದ್ ಹೆಗ್ಡೆ, ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು. ಅಲ್ತಾರು ನಾಗರಾಜ ನಿರೂಪಿಸಿದರು. ಆರೂರು ತಿಮ್ಮಪ್ಪ ಶೆಟ್ಟಿ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News