ವಲಸಿಗರ ಗಡಿಪಾರು ತಡೆಯುವ ಬೈಡನ್ ಆದೇಶಕ್ಕೆ ಕೋರ್ಟ್ ತಡೆ

Update: 2021-01-27 16:22 GMT

ವಾಶಿಂಗ್ಟನ್, ಜ. 27: ನೋಂದಾಯಿಸಲ್ಪಡದ ವಲಸಿಗರ ಗಡಿಪಾರಿಗೆ 100 ದಿನಗಳ ತಡೆ ವಿಧಿಸುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರಕಾರದ ಆದೇಶಕ್ಕೆ ಫೆಡರಲ್ ನ್ಯಾಯಾಧೀಶರೊಬ್ಬರು ಮಂಗಳವಾರ 14 ದಿನಗಳ ತಡೆಯಾಜ್ಞೆ ವಿಧಿಸಿದ್ದಾರೆ.

ಟೆಕ್ಸಾಸ್ ರಾಜ್ಯದ ಅಟಾರ್ನಿ ಜನರಲ್ ಕೆನ್ ಪ್ಯಾಕ್ಸ್‌ಟನ್‌ರ ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶ ಡ್ರೂ ಟಿಪ್ಟನ್, ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗಿನ ಅವಧಿಯಲ್ಲಿ ಆದೇಶ ಜಾರಿಯಾಗದಂತೆ ತಡೆಯಾಜ್ಞೆ ನೀಡಿದರು.

ಗಡಿಪಾರಿಗೆ ವಿಧಿಸಲಾಗಿರುವ ತಡೆಯು ಟೆಕ್ಸಾಸ್ ಜನರನ್ನು ಅಪಾಯಕ್ಕೆ ಗುರಿಪಡಿಸುತ್ತದೆ ಹಾಗೂ ಫೆಡರಲ್ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಪ್ಯಾಕ್ಸ್‌ಟನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2020 ನವೆಂಬರ್ 1ಕ್ಕೂ ಮೊದಲೇ ಅಮೆರಿಕಕ್ಕೆ ಬಂದಿರುವ ನೋಂದಾಯಿಸಲ್ಪಡದ ವಲಸಿಗರ ಗಡಿಪಾರಿಗೆ ತಡೆ ನೀಡುವ ಆದೇಶಕ್ಕೆ ಅಧಿಕಾರ ಸ್ವೀಕರಿಸಿದ ದಿನವೇ ಬೈಡನ್ ಸಹಿ ಹಾಕಿದ್ದಾರೆ. ಆ ಮೂಲಕ ಅವರು ತನ್ನ ಚುನಾವಣಾ ಭರವಸೆಯೊಂದನ್ನು ಈಡೇರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News