ಗಣರಾಜ್ಯೋತ್ಸವ ಸಂದರ್ಭ ಹಿಂಸಾಚಾರ: 2,000ಕ್ಕೂ ಅಧಿಕ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲು

Update: 2021-01-27 16:30 GMT

ಗುರುಗಾಂವ್, ಜ. 27: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಗಣರಾಜ್ಯೋತ್ಸವದ ದಿನ ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ದಿಲ್ಲಿಗೆ ತಲುಪುವ ಉದ್ದೇಶದಿಂದ ಪಲ್ವಾಲ್‌ನಲ್ಲಿ ಪೊಲೀಸ್ ತಡೆಬೇಲಿಗಳನ್ನು ಭೇದಿಸಲು ಯತ್ನಿಸಿದ ಹಾಗೂ ಹಿಂಸಾಚಾರದಲ್ಲಿ ತೊಡಗಿದ ಆರೋಪದಲ್ಲಿ 2,000ಕ್ಕೂ ಅಧಿಕ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 ಗಾಡ್ಪುರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ನೀಡಿದ ದೂರಿನ ಆಧಾರದಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ.

ಪೊಲೀಸರೊಂದಿಗೆ ಹಿಂಸಾಚಾರಕ್ಕೆ ಇಳಿದ, ತಡೆಬೇಲಿ ಹಾಗೂ ಕಂಟೈನರ್‌ಗಳನ್ನು ಬೇಧಿಸಿದ ಹಾಗೂ ಗಾಡ್ಪುರಿಯ ಸೋಫ್ಟಾ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬೆಳಗ್ಗೆ 11.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ ತಡೆದ ಆರೋಪದಲ್ಲಿ 350ರಿಂದ 400 ಟ್ರ್ಯಾಕ್ಟರ್‌ಗಳನ್ನು ಚಲಾಯಿಸಿದ ಹಾಗೂ ಅದರಲ್ಲಿದ್ದ 2,000ದಿಂದ 2,200ರ ವರೆಗಿನ ಪ್ರತಿಭಟನಾಕಾರರ ವಿರುದ್ಧ ಎಫ್ಆರ್ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ಹನೀಶ್ ಖಾನ್ ಹೇಳಿದ್ದಾರೆ.

 ‘‘ನಾವು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಇನ್ನಷ್ಟೇ ಗುರುತಿಸಬೇಕಿದೆ ಹಾಗೂ ಬಂಧಿಸಬೇಕಿದೆ’’ ಎಂದು ಅವರು ಹೇಳಿದ್ದಾರೆ.

 ಪ್ರತಿಭಟನಾಕಾರರು ಫರಿದಾಬಾದ್ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದರು ಹಾಗೂ ದಿಲ್ಲಿಯತ್ತ ತೆರಳಿದರು. ಆದರೆ, ಪೊಲೀಸ್ ಸಿಬ್ಬಂದಿ ಅವರನ್ನು ತಡೆದರು. ಘಟನೆ ಸಂದರ್ಭ ಟ್ರ್ಯಾಕ್ಟರ್ ಢಿಕ್ಕಿಯಾಗುವುದರಿಂದ ಪಲ್ವಾಲ್ ಪೊಲೀಸ್ ಅಧೀಕ್ಷಕ ಹಾಗೂ ಇನ್ನೋರ್ವ ಅಧಿಕಾರಿ ಸ್ಪಲ್ಪದರಲ್ಲೇ ಪಾರಾದರು. ಪೊಲೀಸರು ಅಂತಿಮವಾಗಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸುವಲ್ಲಿ ಯಶಸ್ವಿಯಾದರು ಹಾಗೂ ಪಲ್ವಾಲ್‌ಗೆ ಹಿಂದಿರುಗುವಂತೆ ಮನವೊಲಿಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News