ದಾಖಲೆಯ 143 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ‘ಫಾಲ್ಕನ್ 9’

Update: 2021-01-27 16:39 GMT
ಫೋಟೊ ಕೃಪೆ: SpaceX

ಮಯಾಮಿ (ಅಮೆರಿಕ), ಜ. 27: ಅಮೆರಿಕದ ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್ 9’ ರಾಕೆಟ್, ದಾಖಲೆಯ 143 ಉಪಗ್ರಹಗಳನ್ನು ಹೊತ್ತು ರವಿವಾರ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದೆ.

ಫ್ಲೋರಿಡದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ನಿಲ್ದಾಣದಿಂದ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ಇದಕ್ಕೂ ಮೊದಲು ರಾಕೆಟ್‌ನ ಉಡಾವಣೆಯನ್ನು ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ 24 ಗಂಟೆಗಳ ಅವಧಿಗೆ ಮುಂದೂಡಲಾಗಿತ್ತು.

ಫಾಲ್ಕನ್ ರಾಕೆಟ್, 133 ವಾಣಿಜ್ಯ ಮತ್ತು ಸರಕಾರಿ ಉಪಗ್ರಹಗಳು ಹಾಗೂ 10 ಸ್ಪೇಸ್‌ಎಕ್ಸ್ ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದೆ ಎಂದು ಎಲಾನ್ ಮಸ್ಕ್ ಒಡೆತನದ ಬಾಹ್ಯಾಕಾಶ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ಒಂದೇ ಹಾರಾಟದಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಭೂಮಿಯ ಕಕ್ಷೆಗಳಿಗೆ ಸೇರಿಸಿದ ಮೊದಲ ಬಾಹ್ಯಾಕಾಶ ಯೋಜನೆ ಇದಾಗಿದೆ’’ ಎಂದು ಅವರು ಹೇಳಿದರು.

ರಾಕೆಟ್‌ನ ಬೂಸ್ಟರ್ ಮರಳಿ ಧರೆಗೆ

ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ, ಫಾಲ್ಕನ್ 9 ರಾಕೆಟ್‌ನ ಪ್ರಧಾನ ಬೂಸ್ಟರ್ ರಾಕೆಟನ್ನು ಬಾಹ್ಯಾಕಾಶದ ಅಂಚಿಗೆ ತಳ್ಳಿತು ಹಾಗೂ ಬಳಿಕ ರಾಕೆಟ್‌ನಿಂದ ಪ್ರತ್ಯೇಕಗೊಂಡಿತು. ಅದು ನಂತರ ನಿಯಂತ್ರಿತವಾಗಿ ಭೂಮಿಗೆ ವಾಪಸ್ ಬಂತು.

ಬೂಸ್ಟರ್ ಅಟ್ಲಾಂಟಿಕ್ ಸಾಗರದಲ್ಲಿ ನಿಯೋಜಿಸಲಾಗಿದ್ದ ‘ಆಫ್ ಕೋರ್ಸ್ ಐ ಸ್ಟಿಲ್ ಲವ್ ಯು’ ಎಂಬ ಹೆಸರಿನ ಡ್ರೋನ್ ನೌಕೆಯ ಮೇಲೆ ಇಳಿಯಿತು. ಈ ಮೂಲಕ ಬೂಸ್ಟರ್ ಐದನೇ ಬಾರಿಗೆ ತನ್ನ ಬಾಹ್ಯಾಕಾಶ ಯಾನವನ್ನು ಮುಗಿಸಿ ವಾಪಸ್ ಬಂದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News