ಪ್ರತಿಭಟನೆಯ ಹಳಿ ತಪ್ಪಿಸಿದ ದೀಪ್ ಸಿಧು: ರೈತ ಸಂಘಟನೆಗಳ ಆರೋಪ

Update: 2021-01-27 17:11 GMT

ಹೊಸದಿಲ್ಲಿ, ಜ.27: ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ಅತ್ಯಂತ ಶಾಂತರೀತಿಯಲ್ಲಿ ಟ್ರಾಕ್ಟರ್ ರ‍್ಯಾಲಿ ಆಯೋಜಿಸಲು ರೈತ ಸಂಘಟನೆಗಳು ನಿರ್ಧರಿಸಿದ್ದವು. ಆದರೆ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಲೋಕಸಭೆ ಚುನಾವಣೆ ಪ್ರಚಾರದ ಮುಂಚೂಣಿಯಲ್ಲಿದ್ದ ಕಾರಣ ಪ್ರಭಾವಿ ಎಂದು ಬಿಂಬಿಸಿಕೊಂಡಿದ್ದ ಪಂಜಾಬಿ ನಟ ದೀಪ್ ಸಿಧು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಲು ಪ್ರಧಾನ ಕಾರಣ ಎಂದು ಹಲವು ರೈತ ಸಂಘಟನೆಗಳು ಆರೋಪಿಸಿವೆ. ಪಂಜಾಬ್‌ನ ಮುಕ್ತಸರ್ ಜಿಲ್ಲೆಯವರಾದ ಸಿಧು 2018ರಲ್ಲಿ ತೆರೆಕಂಡ ‘ಜೊರ ದಸ್ ನಂಬರಿಯಾ’ ಎಂಬ ಸಿನೆಮಾದ ಮೂಲಕ ಸ್ಟಾರ್ ಪಟ್ಟ ಪಡೆದುಕೊಂಡರು. ನಟ, ಸಂಸದ ಸನ್ನಿ ದಿಯೋಲ್‌ರ ನಿಕಟವರ್ತಿ ಎಂದು ಪರಿಗಣಿಸಲಾಗಿದ್ದ ಸಿಧುರಿಂದ ತಾವು ಹಾಗೂ ಕುಟುಂಬದವರು ಅಂತರ ಕಾಯ್ದುಕೊಂಡಿರುವುದಾಗಿ 2020ರಲ್ಲಿ ಸನ್ನಿ ದಿಯೋಲ್ ಹೇಳಿದ್ದರು.

 ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಕಳೆದ ವರ್ಷ ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ಆರಂಭವಾದಾಗ ರಾಜ್ಯದಾದ್ಯಂತ ಯುವಕರನ್ನು ಪ್ರತಿಭಟನೆಗೆ ಒಗ್ಗೂಡಿಸಿದ ಪಂಜಾಬಿ ನಟರಲ್ಲಿ ದೀಪ್ ಸಿಧು ಕೂಡಾ ಸೇರಿದ್ದರು.

 ಗಣರಾಜ್ಯೋತ್ಸವ ಸಂದರ್ಭ ಆಯೋಜಿಸಿದ್ದ ಟ್ರಾಕ್ಟರ್ ರ‍್ಯಾಲಿ ನಿಗದಿತ ಮಾರ್ಗ ಬಿಟ್ಟು ಬೇರೆ ರಸ್ತೆಯಲ್ಲಿ ಸಾಗಲು, ಹಾಗೂ ಪ್ರತಿಭಟನಾಕಾರರು ಕೆಂಪುಕೋಟೆಯತ್ತ ಮುನ್ನುಗ್ಗಲು ಸಿಧು ಪ್ರಚೋದನೆ ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಸೆಪ್ಟಂಬರ್ 25ರಂದು ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು ಇದರಲ್ಲಿ ದೀಪ್ ಸಿಧು ಸಕ್ರಿಯ ಪಾತ್ರ ವಹಿಸಿದ್ದ. ಸಿನೆಮ ನಟನಾಗಿದ್ದರಿಂದ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಸಿಧು, ತನ್ನ ಭಾಷಣ, ಹೇಳಿಕೆಯಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆಯ ಹೇಳಿಕೆಗಳನ್ನು ಉಲ್ಲೇಖಿಸುತ್ತಿದ್ದು, ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ದೊರಕಬೇಕು ಎಂಬ ಆಗ್ರಹ ಈತನ ಭಾಷಣದ ಕೇಂದ್ರ ಬಿಂದುವಾಗಿತ್ತು. ತನ್ನ ತಾರಾಪಟ್ಟದ ಪ್ರಭಾವವನ್ನು ಬಳಸಿ ಈತ ರೈತರ ಪ್ರತಿಭಟನೆಯ ಹಾದಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಕೆಲವು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News