ಸಂಭಾವ್ಯ ಅನಾಹುತ ತಪ್ಪಿಸಿದ್ದ ಇಬ್ಬರು ಮಕ್ಕಳಿಗೆ ಅಂಚೆ ಇಲಾಖೆಯಿಂದ ಸನ್ಮಾನ

Update: 2021-01-27 17:43 GMT

ಮಂಗಳೂರು, ಜ.27: ಮಣ್ಣಗುಡ್ಡೆಯ ಗಾಂಧಿನಗರ ಅಂಚೆ ಕಚೇರಿಯಲ್ಲಿ ಕಳೆದ ವರ್ಷ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅನಾಹುತ ಸಂಭವಿಸಿದ ವೇಳೆ ತಕ್ಷಣ ನೆರೆಹೊರೆಯವರಿಗೆ ಮಾಹಿತಿ ನೀಡಿ ಸಂಭಾವ್ಯ ಅನಾಹುತ ತಪ್ಪಿಸಿದ ಇಬ್ಬರು ಮಕ್ಕಳನ್ನು ಬಲ್ಮಠದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಪಣಂಬೂರಿನ ಮಂಗಳೂರು ಪೋರ್ಟ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಸೃಜನ್ ಮತ್ತು 6ನೇ ತರಗತಿ ವಿದ್ಯಾರ್ಥಿನಿ ಶರಣ್ಯಾ ಸಮಯಪ್ರಜ್ಞೆ ಮೆರೆದ ಮಕ್ಕಳು.

2020ರ ಫೆಬ್ರವರಿ 23ರಂದು ಗಾಂಧಿನಗರ ಅಂಚೆ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಆಗ ಅಲ್ಲೇ ಇದ್ದ ಸೃಜನ್ ಮತ್ತು ಶರಣ್ಯಾ ತಕ್ಷಣ ಈ ವಿಚಾರವನ್ನು ನೆರೆ ಹೊರೆಯವರಿಗೆ ಈ ವಿಚಾರ ತಿಳಿಸಿ ಸಂಭವಿಸಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ್ದರು.

ಇಬ್ಬರು ಮಕ್ಕಳ ಸಮಯಪ್ರಜ್ಞೆಯನ್ನು ಗುರುತಿಸಿದ ಮಂಗಳೂರು ಅಂಚೆ ವಿಭಾಗವು ಇಬ್ಬರಿಗೂ ಪ್ರಶಂಸಾ ಪತ್ರ ಹಾಗೂ ಮೈ ಸ್ಟಾಂಪ್ (ಮಕ್ಕಳ ಭಾವಚಿತ್ರ ಹೊಂದಿರುವ ಸ್ಟಾಂಪ್) ನೀಡಿ ಸನ್ಮಾನಿಸಿತು. ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News