ಐಎಸ್‌ಐ ಮಾಜಿ ಮುಖ್ಯಸ್ಥ ದುರಾನಿಗೆ ರಾ ಸಂಪರ್ಕ: ಪಾಕ್ ಆರೋಪ

Update: 2021-01-28 05:21 GMT

ಇಸ್ಲಾಮಾಬಾದ್: ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮಾಜಿ ಮುಖ್ಯಸ್ಥ, ನಿವೃತ್ತ ಲೆಫ್ಟಿನೆಂಟ್ ಜನರಲ್ ಅಸಾದ್ ದುರಾನಿ 2008ರಿಂದಲೂ ಭಾರತದ ವಿದೇಶ ಬೇಹುಗಾರಿಕೆ ಏಜೆನ್ಸಿ ರಾ (ರೀಸರ್ಚ್ ಆ್ಯಂಡ್ ಅನಾನಿಸಿಸ್ ವಿಂಗ್) ಜತೆ ಸಂಪರ್ಕ ಇತ್ತು ಎಂದು ಪಾಕಿಸ್ತಾನ ಆಪಾದಿಸಿದೆ ಎಂದು hindustantimes.com ವರದಿ ಮಾಡಿದೆ.

ವಿಮಾನ ಪ್ರಯಾಣ ನಿಷೇಧ ಪಟ್ಟಿಯಿಂದ ತಮ್ಮ ಹೆಸರನ್ನು ಕಿತ್ತುಹಾಕಿಸಲು ದುರಾನಿ ನಡೆಸಿರುವ ಪ್ರಯತ್ನವನ್ನು ಪಾಕಿಸ್ತಾನದ ರಕ್ಷಣಾ ಸಚಿವಾಲಯ ವಿರೋಧಿಸಿದೆ.

ದುರಾನಿ ಭಾರತದ ಮಾಜಿ ರಾ ಮುಖ್ಯಸ್ಥ ಎ.ಎಸ್.ದೌಲತ್ ಜತೆ ಸೇರಿ "ಸ್ಪೈ ಕ್ರಾನಿಕಲ್ಸ್: ರಾ, ಐಎಸ್‌ಐ ಆ್ಯಂಡ್ ದಿ ಇಲ್ಯೂಶನ್ ಆಫ್ ಪೀಸ್" ಕೃತಿಯನ್ನು ರಚಿಸಿದ ಬಳಿಕ ಪಾಕಿಸ್ತಾನಿ ಅಧಿಕಾರಿಗಳಿಂದ ದುರಾನಿ ಕಿರುಕುಳ ಎದುರಿಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರ ದುರಾನಿಯನ್ನು ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ ಸೇರಿಸಿದ್ದು, ಪಾಕ್ ಸೇನೆ ಅವರ ಪಿಂಚಣಿ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ಕಿತ್ತುಹಾಕಿದೆ.

ಇಎಲ್‌ಸಿ ಪಟ್ಟಿಯಿಂದ ತಮ್ಮ ಹೆಸರು ಕಿತ್ತುಹಾಕುವಂತೆ ಕೋರಿ ದುರಾನಿ, ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಆದರೆ ದೇಶವಿರೋಧಿ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ಕಾರಣದಿಂದ ಅವರನ್ನು ಇಎಲ್‌ಸಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದೆ.

ದುರಾನಿ ಕೃತಿಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅಂಶಗಳಿದ್ದು, ಇದು ಸರ್ಕಾರಿ ಗೌಪ್ಯ ಕಾಯ್ದೆ-1923ಕ್ಕೆ ವಿರುದ್ಧವಾಗಿದೆ ಎಂದು ಸಚಿವಾಲಯ ಪ್ರತಿಪಾದಿಸಿದೆ. ಜತೆಗೆ ಉನ್ನತ ನಾಯಕತ್ವದ ವಿರುದ್ಧ ತಪ್ಪುಕಲ್ಪನೆ, ಗೊಂದಲ, ಪ್ರಶ್ನಾರ್ಥಕ ಚಿಹ್ನೆಯನ್ನು ಸೃಷ್ಟಿಸುವಂಥ ಹಲವು ಅಂಶಗಳಿವೆ ಎನ್ನುವುದು ಸಚಿವಾಲಯದ ವಾದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News