ಮನಪಾ : ಅಂದಾಜು 317.18 ಕೋಟಿ ರೂ. ಮಿಗತೆ ಬಜೆಟ್ ಮಂಡನೆ!

Update: 2021-01-28 10:05 GMT

ಮಂಗಳೂರು, ಜ.28: ಮಹಾನಗರ ಪಾಲಿಕೆ ಆಡಳಿತವು 2021-22ನೆ ಅವಧಿಗೆ ಅಂದಾಜು 609.92 ಕೋಟಿ ರೂ. ಆದಾಯ ನಿರೀಕ್ಷೆ, 576.28 ಕೋಟಿ ರೂ. ಅಂದಾಜು ವೆಚ್ಚದೊಂದಿಗೆ ಆರಂಭಿಕ ಶುಲ್ಕ ಸೇರಿ ಒಟ್ಟು ಅಂದಾಜು 317.18 ರೂ.ಗಳ ಮಿಗತೆ ಬಜೆಟ್ ಮಂಡಿಸಿದೆ.

ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಕುರಿತಾದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಪ್ರಸಕ್ತ ಬಿಜೆಪಿ ಆಡಳಿತಾವಧಿಯ ಪ್ರಥಮ ಅಂದಾಜು ಬಜೆಟ್ ಮಂಡಿಸಿದರು.

ಅಂದಾಜು ಮಿಗತೆ ಬಜೆಟ್‌ನಲ್ಲಿ 2021-22ನೆ ಸಾಲಿನ ಆರಂಭಿಕ ಶುಲ್ಕ 283.53 ಕೋಟಿ ರೂ.ಗಳು ಸೇರಿದ್ದು, ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸಲಾಗಿಲ್ಲ. ಪಾಲಿಕೆಯ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ತೆರಿಗೆ ಆದಾಯಕ್ಕೆ ಒತ್ತು ನೀಡಲು ಪ್ರಸ್ತಾಪಿಸಲಾಗಿದೆ. ಮಾತ್ರವಲ್ಲದೆ, ಖಾಸಗಿ ಅನಧಿಕೃತ ಜಾಹೀರಾತು ಹಾಗೂ ಇತರ ಫಲಕಗಳ ನಿಯಂತ್ರಣಕ್ಕಾಗಿ ಹೊಸ ನಿಯಮಗಳನ್ನು ಸಿದ್ಧಪಡಿಸಿ ಜಾಹೀರಾತು ಬೈಲಾ ತಯಾರಿಸಲು ಕ್ರಮ ಕೈಗೊಳ್ಳುವ ಹಾಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಆಯವ್ಯಯದಲ್ಲಿ ನಿರ್ಧರಿಸಲಾಗಿದೆ.

ಕಡತಗಳ ಶೀಘ್ರ ವಿಲೇವಾರಿಗಾಗಿ ಕಾಗದ ರಹಿತ ಕಚೇರಿ ಪದ್ಧತಿಯನ್ನು ಕೇಂದ್ರ ಕಚೇರಿಯಲ್ಲಿ ಜಾರಿಗೆ ತಂದಿರುವಂತೆ, ಪಾಲಿಕೆ ಎಲ್ಲಾ ಕಚೇರಿಗಳಿಗೂ ಅದನ್ನು ವಿಸ್ತರಿಸಿ, ಸಾರ್ವಜನಿಕರಿಗೆ ಎ್ಲ ಸೇವೆಯನ್ನು ಆನ್‌ಲೈನ್ ಮೂಲಕ ನೀಡಲು ಕ್ರಮ ವಹಿಸಲಾಗು ವುದು ಎಂದು ಕಿಣ್ ಕುಮಾರ್ ಭರವಸೆ ನೀಡಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಆದ್ಯತೆ, ಸ್ವಚ್ಛತೆ ಮತ್ತು ಶುಚಿಗೆ ಒತ್ತು, ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ಪ್ರಗತಿಯಲ್ಲಿರುವ ಕಾಮಗಾರಿಗಳನು ಪೂರ್ಣಗೊಳಿಸಲು ಆದ್ಯತೆ, ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಒತ್ತು ನೀಡುವುದಾಗಿ ಬಜೆಟ್ ಮಂಡಿಸಿದ ಕಿರಣ್ ಕುಮಾರ್ ಹೇಳಿದರು.

ತೆರಿಗೆ- ತೆರಿಗೆಯೇತರ ಆದಾಯಕ್ಕೆ ಒತ್ತು

ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 2,05,003ಕ್ಕೂ ಅಧಿಕ ಆಸ್ತಿಗಳನ್ನು ಗುರುತಿಸಲಾಗಿದ್ದು, ಕೈತಪ್ಪಿರುವ ಆಸ್ತಿಗಳನ್ನು ಗುರುತಿಸಿ ಆಸ್ತಿ ಜಾಗದ ವ್ಯಾಪ್ತಿಗೆ ಒಳಪಡಿಸಿ ಸಂಪನ್ಮೂಲಗಳನ್ನು ಹೆಚ್ಚಿಸಲು ಕಠಿಣ ಕ್ರಮ ಕೈಗೊಳ್ಳಲು ಉದ್ದೇಶಿಸಿರುವುದರಿಂದ ಆಸ್ತಿ ಸಮೀಕ್ಷೆ ಆರಂಭಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಿಂದ ಆನ್‌ಲೈನ್ ಸೇವೆಯನ್ನು ಸಾರ್ವಜನಿಕರಿಗೆ ನೀಡಲಾಗುವುದು. ಆಸ್ತಿ ತೆರಿಗೆಯಿಂದ 2021-22ನೆ ಸಾಲಿಗೆ 70 ಕೊೀಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.

ಸೇವಾ ಶುಲ್ಕ ಸಂಗ್ರಹಣೆಗೆ ಆದ್ಯತೆ

ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಊಗ ಆಸ್ತಿ ತೆರಿಗೆ ವಿನಾಯಿತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆ ಮಾಡಲಾಗುವುದು, ಉಪ ಆಯುಕ್ತರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತ ದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆಯ ಪ್ರಕರಣ ಪತ್ತೆ ಹಚ್ಚಿ ತೆರಿಗೆ ಮತ್ತು ತೆರಿಗೆಯೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಿರಣ್ ಕುಮಾರ್ ಹೇಳಿದರು.

ಉಪ ಮೇಯರ್ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಶರತ್ ಕುಮಾರ್, ಜಗದೀಶ್ ಶೆಟ್ಟಿ, ಆಯುಕ್ತ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಪಾಲಿಕೆಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಒಟ್ಟು 184 ಕೋಟಿ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ. ಅದರಲ್ಲಿ ಕೇಂದ್ರ ಸರಕಾರದಿಂದ 25.35 ಕೋಟಿ ರೂ. ರಾಜ್ಯದಿಂದ 140 ಕೋಟಿ ರೂ. ಹಾಗೂ ಕೇಂದ್ರ ಪುರಸ್ಕೃತ ಹಾಗೂ ಇತರ ಅನುದಾನ 18.65 ಕೋಟಿ ರೂ.ಗಳು.

ಬಜೆಟ್ ಪ್ರಮುಖ ಅಂಶಗಳು

ಅನಧಿಕೃತ ಜಾಹೀರಾತು ಫಲಕ, ನಾಮಫಲಕ ಮತ್ತು ಹೋರ್ಡಿಂಗ್ಸ್‌ ಮೇಲೆ ದಂಡ ವಿಧಿಸಿ ತೆರವಿಗೆ ಕ್ರಮ. ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ಥಿಗಳ ವರ್ಗಾವಣೆ ಸಂದರ್ಭ ಮುದ್ರಾಂಕ ಶುಲ್ಕದಲ್ಲಿ ಶೇ. 2ರಷ್ಟು ಅಧಿಭಾರ ಶುಲ್ಕ ಸಂಗ್ರಹ.

ಉದ್ದಿಮೆ ಪರವಾನಿಗೆ ಶುಲ್ಕದಿಂದ ಅಂದಾಜು 4.50 ಕೋಟಿ ರೂ. ಆದಾಯ ನಿರೀಕ್ಷೆ. ಆಸ್ತಿ ತೆರಿಗೆ ಪಾವತಿ ಮತ್ತು ಉದ್ದಿಮೆ ಪರವಾನಿಗೆ ನೀಡುವ ಸಂದರ್ಭ ಎಸ್‌ಡಬ್ಲು ಎಂ ಬೈಲಾ ನಿಯಮದಂತೆ ವಸೂಲಿಗೆ ಕ್ರಮ ವಹಿಸಲಾಗುತ್ತಿದ್ದು, ಆ ಮೂಲಕ ಅಂದಾಜು 21 ಕೋಟಿ ರೂ. ಆದಾಯ ನಿರೀಕ್ಷೆ.

ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳು ಹಾಗೂ ಮಾರುಕಟ್ಟೆಗಳ ಬಾಡಿಗೆ ಪರಿಷ್ಕರಣೆ ಮಾಡಿ ಬಾಡಿಗೆ ರೂಪದಲ್ಲಿ 3.74 ಕೋಟಿ ರೂ. ಆದಾಯ ನಿರೀಕ್ಷೆ.

ನೆಲ ಬಾಡಿಗೆ ಶುಲ್ಕವಾಗಿ 3 ಕೋಟಿ ರೂ. ಹಾಗೂ ರಸ್ತೆ ಕಡಿತ ಶುಲ್ಕದಿಂದ 8 ಕೋಟಿ ರೂ. ಆದಾಯ ನಿರೀಕ್ಷೆ.
ಅನಧಿಕೃತ ನೀರು ಸಂಪರ್ಕ ಸಕ್ರಮಗೊಳಿಸಲು ನೀರಿನ ಅದಾಲತ್ ನಡೆಸಿ, ಹೆಚ್ಚುವರಿ ಆದಾಯ ನಿರೀಕ್ಷೆ. ಒಳಚರಂಡಿ ಬಳಕೆದಾರರಿಂದ ಶುಲ ವಸೂಲಿಗೆ ಪ್ರಸ್ತಾಪಿಸಲಾಗಿದ್ದು, 2 ಕೋಟಿ ರೂ. ಆದಾಯ ನಿರೀಕ್ಷೆ.

ಕಟ್ಟಡ ಪರವಾನಿಗೆ ಶುಲ್ಕ ಮತ್ತು ಗ್ರೀನರಿ ಶುಲ್ಕ ಪರಿಷ್ಕರಿಸಲು ಪರಿಷತ್ ಅನುಮೋದನೆಗೆ ಮಂಡನೆ. ಪ್ರೀಮಿಯಂ ಎಫ್‌ಎಆರ್ ಶುಲ್ಕ 8 ಕೋಟಿ ರೂ. ಆದಾಯ ನಿರೀಕ್ಷೆ.

ಬೀದಿ ದೀಪಗಳ ನಿರ್ವಹಣೆಗೆ 1.50 ಕೋಟಿ ರೂ. ಮೀಸಲು. ಪಾಲಿಕೆಯ ಎಲ್ಲಾ ವೆಟ್‌ವೆಲ್‌ಗಳಲ್ಲಿ ಒಳಚರಂಡಿ ನೌಕರರಿಗೆ ವಿಶ್ರಾಂತಿ ಗೃಹ ನಿರ್ಮಾಣ. ಖಾಸಗಿ ಕಟ್ಟಡಗಳಲ್ಲಿ ಸೆಪ್ಟಿಕ್ ಟ್ಯಾಂಕ್ ಅಳವಡಿಸುವ ಕಟ್ಟಡದ ಮಾಲಕರಿಗೆ ಸ್ವಚ್ಛೆಯ ಸೈನಿಕ ಎಂಬ ಅಭಿನಂದನಾ ಪತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News