ʼಆರೋಪಿಯು ಅಪ್ರಾಪ್ತೆಯ ಕೈ ಹಿಡಿಯುವುದು ಹಾಗೂ ತನ್ನ ಪ್ಯಾಂಟ್ ಝಿಪ್ ತೆರೆಯುವುದು ಪೋಕ್ಸೋ ಅಡಿ ಲೈಂಗಿಕ ದೌರ್ಜನ್ಯವಲ್ಲ'

Update: 2021-01-28 18:38 GMT

ಮುಂಬೈ,ಜ.28: ಅಪ್ರಾಪ್ತ ವಯಸ್ಕರ ಕೈ ಹಿಡಿದುಕೊಂಡು ಅವರೆದುರು ಪ್ಯಾಂಟ್ ಝಿಪ್ ಬಿಚ್ಚಿದರೆ ಅದು ಪೊಕ್ಸೊ ಕಾಯ್ದೆಯಡಿ ಲೈಂಗಿಕ ಹಲ್ಲೆಯ ವ್ಯಾಖ್ಯೆಯಲ್ಲಿ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಇಂತಹ ಕೃತ್ಯಗಳು ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಕಲಂ 354-ಎ(1)(i) ಅಡಿ ಲೈಂಗಿಕ ಕಿರುಕುಳವಾಗುತ್ತವೆ ಎಂದು ಅದು ಸ್ಪಷ್ಟಪಡಿಸಿದೆ.

ಐದರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳವನ್ನು ನೀಡಿದ ಆರೋಪದಲ್ಲಿ ತನ್ನ ದೋಷನಿರ್ಣಯ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ 50ರ ಹರೆಯದ ವ್ಯಕ್ತಿಯೋರ್ವ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾ.ಪುಷ್ಪಾ ಗನೇಡಿವಾಲಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದೊಂದು ಗಂಭೀರ ಲೈಂಗಿಕ ಹಲ್ಲೆ ಪ್ರಕರಣವಾಗಿದೆ ಎಂದು ತೀರ್ಪು ನೀಡಿದ್ದ ಸೆಷನ್ಸ್ ನ್ಯಾಯಾಲಯವು ಅರ್ಜಿದಾರನಿಗೆ ಐದು ವರ್ಷಗಳ ಶಿಕ್ಷೆ ಮತ್ತು 25,000 ರೂ.ದಂಡವನ್ನು ವಿಧಿಸಿತ್ತ್ತು. ದಂಡ ಪಾವತಿಸಲು ವಿಫಲಗೊಂಡರೆ ಆರು ತಿಂಗಳ ಸಾದಾಶಿಕ್ಷೆಯನ್ನು ಅನುಭವಿಸುವಂತೆಯೂ ಅದು ಆದೇಶಿಸಿತ್ತು.

ಮಗುವಿನ ತಾಯಿ ಈ ಬಗ್ಗೆ ದೂರು ಸಲ್ಲಿಸಿದ್ದು,ಆರೋಪಿಯು ತನ್ನ ಮಗಳ ಕೈಗಳನ್ನು ಹಿಡಿದುಕೊಂಡು ತನ್ನ ಪ್ಯಾಂಟ್ ಝಿಪ್ ಬಿಚ್ಚಿದ್ದನ್ನು ತಾನು ನೋಡಿದ್ದೆ ಎಂದು ತಿಳಿಸಿದ್ದರು. ವ್ಯಕ್ತಿಯು ಗುಪ್ತಾಂಗವನ್ನು ಪ್ರದರ್ಶಿಸಿದ್ದ ಮತ್ತು ತನ್ನನ್ನು ಹಾಸಿಗೆಗೆ ಕರೆದಿದ್ದ ಎಂದು ಮಗಳು ತನಗೆ ತಿಳಿಸಿದ್ದಾಗಿಯೂ ಆಕೆ ದೂರಿನಲ್ಲಿ ಹೇಳಿದ್ದರು.

ಜ.19ರಂದು ಇಂತಹುದೇ ತೀರ್ಪನ್ನು ನೀಡಿದ್ದ ನ್ಯಾ.ಗನೇಡಿವಾಲಾ ಅವರು ‘ಚರ್ಮಕ್ಕೆ ಚರ್ಮದ ಸಂಪರ್ಕವಿಲ್ಲದೆ ’ ಮೈಯನ್ನು ತಡಕಾಡಿದರೆ ಅದು ಲೈಂಗಿಕ ಹಲ್ಲೆಯಾಗುವುದಿಲ್ಲ ಎಂದು ತಿಳಿಸಿ,ಪೊಕ್ಸೊ ಕಾಯ್ದೆಯಡಿ ಲೈಂಗಿಕ ಹಲ್ಲೆಯ ದೋಷನಿರ್ಣಯಗೊಂಡಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿದ್ದರು. ಆರೋಪಿಯು 12ರ ಹರೆಯದ ಬಾಲಕಿಯನ್ನು ಪೇರಳೆ ಹಣ್ಣನ್ನು ನೀಡುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದು,ಆಕೆಯ ಎದೆಯನ್ನು ಸ್ಪರ್ಶಿಸಿ ಬೆತ್ತಲೆಗೊಳಿಸಲು ಪ್ರಯತ್ನಿಸಿದ್ದ ಎಂದು ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಲಾಗಿತ್ತು.

ತನ್ನ ಹಿಂದಿನ ಆದೇಶದಲ್ಲಿದ್ದಂತೆ ನ್ಯಾ.ಗನೇಡಿವಾಲಾ ಅವರು ಲೈಂಗಿಕ ಹಲ್ಲೆಯನ್ನು ವ್ಯಾಖ್ಯಾನಿಸಿರುವ ಪೊಕ್ಸೊ ಕಾಯ್ದೆಯ ಕಲಂ 7ನ್ನು ಮತ್ತೊಮ್ಮೆ ಉಲ್ಲೇಖಿಸಿದ್ದಾರೆ. ಪ್ರತ್ಯಕ್ಷದರ್ಶಿ ಸಾಕ್ಷಿಯು (ಬಾಲಕಿಯ ತಾಯಿ) ನೋಡಿದ್ದಾರೆನ್ನಲಾಗಿರುವ ಆರೋಪಿಯು ಬಾಲಕಿಯ ಕೈಗಳನ್ನು ಹಿಡಿದುಕೊಂಡು ತನ್ನ ಪ್ಯಾಂಟ್ ಝಿಪ್‌ನ್ನು ಬಿಚ್ಚಿದ ಕೃತ್ಯವು ಈ ಕಲಮ್‌ನಡಿ ಲೈಂಗಿಕ ಹಲ್ಲೆಯ ವ್ಯಾಖ್ಯೆಗೊಳಪಡುವುದಿಲ್ಲ ಎಂದು ಹೇಳಿದ್ದಾರೆ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಬುಧವಾರ ಬಾಂಬೆ ಉಚ್ಚ ನ್ಯಾಯಾಲಯದ ಜ.19ರ ತೀರ್ಪನ್ನು ವಿಶೇಷವಾಗಿ ಉಲ್ಲೇಖಿಸಿ ಉಚ್ಚ ನ್ಯಾಯಾಲಯದ ತೀರ್ಪುಲೈಂಗಿಕ ಅಪರಾಧಿಗಳನ್ನು ದಂಡನೆಗೊಳಪಡಿಸುವಲ್ಲಿ ಅತ್ಯಂತ ಅಪಾಯಕಾರಿ ಪೂರ್ವ ನಿದರ್ಶನಕ್ಕೆ ನಾಂದಿ ಹಾಡುತ್ತದೆ ಎಂದು ಹೇಳಿದ ಬಳಿಕ ಸರ್ವೋಚ್ಚ ನ್ಯಾಯಾಲಯವು ಸದ್ರಿ ತೀರ್ಪನ್ನು ತಡೆಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News