ಮನಪಾ ಬಜೆಟ್ ಜನಸಾಮಾನ್ಯರ ಜೇಬಿಗೆ ಕತ್ತರಿ : ವಿಪಕ್ಷ ಆಕ್ಷೇಪ

Update: 2021-01-28 11:43 GMT

ಮಂಗಳೂರು, ಜ.28: ಕೊರೋನ ಲಾಕ್‌ಡೌನ್ ಆರ್ಥಿಕ ಸಂಕಷ್ಟದಿಂದ ಜನರಿನ್ನೂ ಹೊರಬಂದಿಲ್ಲ. ಅಂತಹ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತವು ಬಜೆಟ್‌ನಲ್ಲಿ ಆಸ್ತಿ ತೆರಿಗೆ, ನೀರು, ಘನತ್ಯಾಜ್ಯ ಶುಲ್ಕದಲ್ಲಿ ಹೆಚ್ಚಳ, ಉದ್ದಿಮೆ ಪರವಾನಿಗೆ ಮೊದಲಾದವುಗಳ ಮೂಲಕ ಜನಸಾಮಾನ್ಯರಿಗೆ ಹೊರೆ ಹಾಕುವ ಮೂಲಕ ಅವರ ಜೇಬಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ವಿಪಕ್ಷ ಆರೋಪಿಸಿದೆ.

ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಇಂದು ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಅವರು ಮಂಡಿಸಿದ 2021-22ನೆ ಸಾಲಿನ ಆಯವ್ಯಯ (ಬಜೆಟ್)ವನ್ನು ಆಡಳಿತ ಪಕ್ಷದ ಸದಸ್ಯರು ಸ್ವಾಗತಿಸಿದರೆ, ವಿಪಕ್ಷ ಸದಸ್ಯರು ನ್ಯೂನ್ಯತೆಗಳನ್ನು ಬೊಟ್ಟು ಮಾಡಿ ಆಕ್ಷೇಪ ವ್ಯಕ್ತಪಡಿಸಿದರು.

ವಿಪಕ್ಷ ಸದಸ್ಯರಾದ ನವೀನ್ ಡಿಸೋಜಾ, ಬಜೆಟ್‌ನಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡಲಾಗಿಲ್ಲ ಎಂದರೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಅಬ್ದುಲ್ ಲತೀಫ್ ಆಗ್ರಹಿಸಿದರು.

ಈಗಾಗಲೇ ಕೊರೋನ ಸಂಕಷ್ಟದಿಂದ ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಜನ ಸಾಮಾನ್ಯರ ಮೇಲೆ ಆಸ್ತಿ ತೆರಿಗೆ, ತ್ಯಾಜ್ಯ ತೆರಿಗೆ, ನೀರಿನ ಶುಲ್ಕ ಹೆಚ್ಚಳ ಮಾಡಿ ನಾಗರಿಕರ ಮೇಲೆ ಹೊರೆ ಹಾಕುವ ಬಗ್ಗೆ ಗಮನ ಹರಿಸಿ ಬೇಡಿಕೆ ನಿರೀಕ್ಷೆ ಮಾಡಬೇಕಾಗಿದೆ ಎಂದು ಸದಸ್ಯ ವಿನಯ್ ರಾಜ್ ಹೇಳಿದರು.

ಬಜೆಟ್ ಯಾವಾಗಲೂ ಬೇಡಿಕೆ, ಸಂಗ್ರಹ ಹಾಗೂ ಉಳಿಕೆ ಪ್ರಾಮುಖ್ಯ. ಆದರೆ, ಪಾಲಿಕೆಯಲ್ಲಿ ಇಂದು ಮಂಡಿಸಲಾದ ಬಜೆಟ್‌ನಲ್ಲಿ ಅದು ಕಾಣುತ್ತಿಲ್ಲ. ಬಜೆಟ್‌ನಲ್ಲಿ ತೆರಿಗೆ ಪ್ರಸ್ತಾಪ ಜನರಿಗೆ ಹೊರೆಯಾಗುವ ರೀತಿಯಲ್ಲಿದೆ. ಮೂಡಾದಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಶೇ. 50ರಷ್ಟು ನಗರ ಪಾಲಿಕೆಗೆ ಸಿಗುವಂತಾಗಬೇಕು. ಹಿಂದೆ 24000 ಲೀಟರ್ ನೀರನ್ನು 65 ರೂ.ಗಳಿಗೆ ನೀಡಲಾ ಗುತ್ತಿತ್ತು. ಅದನ್ನು ಆಡಳಿತಾಧಿಕಾರಿ ಅವಧಿಯಲ್ಲಿ 8000 ಲೀಟರ್‌ಗಳಿಗೆ ಇಳಿಕೆ ಮಾಡಿ ಮತ್ತೆ 10,000 ಲೀಟರ್‌ಗೆ ಏರಿಕೆ ಮಾಡಲಾಗಿದ್ದರೂ ಆ ಶುಲ್ಕವಿನ್ನೂ ಅನುಷ್ಠಾನ ಮಾಡಲಾಗಿಲ್ಲ. ಒಟ್ಟಿನಲ್ಲಿ ಇದು ಹೊಸ ಬಾಟಲಿಯಲ್ಲಿ ಹಳೆ ಮದ್ಯ ಎಂದು ವಿಪಕ್ಷದ ಹಿರಿಯ ಸದ್ಯ ಶಶಿಧರ ಹೆಗ್ಡೆ ಅಭಿಪ್ರಾಯಿಸಿದರು.

ವಾಣಿಜ್ಯ ಕಾಂಪ್ಲೆಕ್ಸ್‌ಗಳು, ಮಲ್ಟಿ ಲೆವೆಲ್ ಪಾರ್ಕಿಂಗ್ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಜತೆಗೆ ಆದಾಯ ಸಂಗ್ರಹಕ್ಕೆ ಒತ್ತು ನೀಡುವ ಪ್ರಸ್ತಾಪವೇ ಬಜೆಟ್‌ನಲ್ಲಿ ಇಲ್ಲ. ಬದಲಾಗಿ ಜನಸಾಮಾನ್ಯರಿಗೆ ಹೊರೆಯಾಗುವ ತೆರಿಗೆ ಹೆಚ್ಚಳ ಪ್ರಸ್ತಾಪ. ಇದು ಆಡಳಿತ ಪಕ್ಷಕ್ಕೆ ಉತ್ತಮ ಬಜೆಟ್ ಆಗಿದ್ದರೂ ನಾಗರಿಕರಿಗೆ ಹೊರೆ ಬಜೆಟ್ ಎಂದು ಪ್ರವೀಣ್ ಚಂದ್ರ ಆಳ್ವ ಆಕ್ಷೇಪಿಸಿದರು.

ಸ್ಮಾರ್ಟ್ ಸಿಟಿಯಡಿ ಬೀದಿದೀಪಗಳ ನಿರ್ವಹಣೆಗೆ 1.50 ಕೋಟಿರೂ. ಮೀಸಲಿರಿಸಿದ್ದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಗುತ್ತಿಗೆದಾರ ಇದಕ್ಕೆ ಸಂಬಂಧಿಸಿ ಬ್ಯಾಂಕ್ ಗ್ಯಾರಂಟಿಯನ್ನೂ ನೀಡದಿರುವಾಗ ಅದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಸಮಂಜಸವಲ್ಲ ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಆಕ್ಷೇಪಿಸಿದರು.

ಬಜೆಟ್‌ನ್ನು ಬೆಂಬಲಿಸಿ ಆಡಳಿತ ಪಕ್ಷದ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಹೇಮಲತಾ, ಮನೋಜ್ ಕುಮಾರ್, ಶಕೀಲಾ ಕಾವ, ವರುಣ್ ಚೌಟ ಮಾತನಾಡಿದರು.

ಜನರ ಅಭಿಪ್ರಾಯ ಕ್ರೋಢೀಕರಿಸಿದ ಬಜೆಟ್

''ಜನರ ಅಭಿಪ್ರಾಯವನ್ನು ಕ್ರೋಢೀಕರಿಸಿ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ಮನಪಾ ನಿರೀಕ್ಷಿತ ಆದಾಯದ ಶೇ. 1ರಷ್ಟನ್ನು ಕ್ರೀಡೆಗಾಗಿ ಮೀಸಲಿಡುವುದು ಸಾಮಾನ್ಯ. ಆದರೆ ಸ್ಥಾಯಿ ಸಮಿತಿ ಅಧ್ಯಕ್ಷರು ಶೇ. 2ರಷ್ಟು ಮೊತ್ತವನ್ನು ಮೀಸಲಿರಿಸಿದ್ದಾರೆ.
-ಪ್ರೇಮಾನಂದ ಶೆಟ್ಟಿ, ಮುಖ್ಯ ಸಚೇತಕರು, ಮನಪಾ

ಕಿಯೋನಿಕ್ಸ್ ಸಂಸ್ಥೆ ವತಿಯಿಂದ ರಚಿಸಲಾದ ಸಾಫ್ಟ್‌ವೇರ್ ವ್ಯವಸ್ಥೆಯಿಂದ ಉದ್ದಿಮೆ ಪರವಾನಿಗೆ ಪಡೆಯುವಲ್ಲಿ ಸಾರ್ವಜನಿಕರಿಗೆ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ ಎಂಬ ಬಜೆಟ್ ಪ್ರಸ್ತಾವನೆಯನ್ನು ಉಲ್ಲೇಖಿಸಿದ ವಿಪಕ್ಷ ನಾಯಕ ಅಬ್ದುಲ್ ರವೂಫ್, ಖಾಸಗಿ ಸಂಸ್ಥೆಯಿಂದ ಅಭಿವೃದ್ಧಿಪಡಿಸಿದ ಉದ್ದಿಮೆ ಪರವಾನಿಗೆ ತಂತ್ರಾಂಶವನ್ನು ಮನಪಾ ಬಳಸುತ್ತಿರುವ ಬಗ್ಗೆ ಪೌರಾಡಳಿತ ನಿರ್ದೇಶನಾಲಯ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪತ್ರವನ್ನು ಬಜೆಟ್ ವಿಶೇಷ ಸಭೆಯಲ್ಲಿ ಓದಿದರು.

ಈ ಪತ್ರವನ್ನು ಪಾಲಿಕೆ ಆಯುಕ್ತರಿಗೆ ಪೌರಾಡಳಿತ ನಿರ್ದೇಶನಾಲಯವೇ ಬರೆದಿದ್ದು, ಬಜೆಟ್‌ನಲ್ಲಿ ಕಿಯೋನಿಕ್ಸ್ ಸಂಸ್ಥೆಯನ್ನು ಉಲ್ಲೇಖಿಸಿರುವ ಬಗ್ಗೆ ತಾನು ಈ ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಹೇಳಿದರಲ್ಲದೆ, ಇದು ಸರಕಾರದ ಆದೇಶದ ಉಲ್ಲಂಘನೆ ಯಲ್ಲವೇ ಎಂದು ಪ್ರಶ್ನಿಸಿದರು.

ಪತ್ರದಲ್ಲಿ ಪೌರಾಡಳಿತ ನಿರ್ದೇಶನಾಲಯವು, ಪಾಲಿಕೆಗೆ ಕಡ್ಡಾಯವಾಗಿ ವ್ಯಾಪಾರ್ ಆನ್‌ಲೈನ್ ಸರಕಾರಿ ತಂತ್ರಾಂಶದ ಮೂಲಕವೇ ಉದ್ದಿಮೆ ಪರವಾನಿಗೆ ನೀಡುವಂತೆ ಕ್ರಮ ವಹಿಸಲು ಸೂಚಿಸಿದೆ. ಹಾಗಿದ್ದರೂ ಬಜೆಟ್‌ನಲ್ಲಿ ಖಾಸಗಿಯ ಕಿಯೋನಿಕ್ಸ್ ಸಂಸ್ಥೆಯ ಸಾಫ್ಟ್‌ವೇರ್ ಮೂಲಕ ಪರವಾನಿಗೆ ನೀಡುವುದಾಗಿ ಹೇಳಿರುವುದು ಸರಕಾರದ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News