ಎಲ್ಲ ಪ್ರತಿಭಟನಾಕಾರರನ್ನು ಜೈಲಿಗೆ ತಳ್ಳಿ: ಮೋದಿ ಸರಕಾರಕ್ಕೆ ರೈತ ನಾಯಕರ ಸವಾಲು
Update: 2021-01-28 20:04 IST
ಹೊಸದಿಲ್ಲಿ,ಜ.28: ನೂತನ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ತಾವು ದೃಢಸಂಕಲ್ಪವನ್ನು ಮಾಡಿದ್ದೇವೆ ಎಂದು ಮಂಗಳವಾರ ಹೇಳಿರುವ ರೈತ ನಾಯಕರು, ಎಲ್ಲ ಪ್ರತಿಭಟನಾಕಾರರನ್ನು ಜೈಲಿಗೆ ತಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಡ್ಡಿದ್ದಾರೆ.
‘ನಾವು ಪ್ರತಿಭಟನಾನಿರತ ರೈತರೊಂದಿಗಿದ್ದೇವೆ ಮತ್ತು ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದ್ದೇವೆ ’ಎಂದು ಹನ್ನಾನ್ ಮೋಲ್ಲಾಹ್, ರಾಜೇಶ್ ಟಿಕಾಯತ್, ಸಂಸದ ಹಾಗೂ ಎಕೆಐಎಸ್‌ನ ಜಂಟಿ ಕಾರ್ಯದರ್ಶಿ ಕೆ.ಕೆ.ರಾಗೇಶ ಸೇರಿದಂತೆ ರೈತ ನಾಯಕರು ತಿಳಿಸಿದರು.
ರಾಜಕೀಯ ನಾಯಕರೂ ಗುರುವಾರ ಪ್ರತಿಭಟನಾನಿರತ ರೈತರೊಂದಿಗೆ ಏಕತೆಯನ್ನು ವ್ಯಕ್ತಪಡಿಸಿದ್ದು,ಮೂರು ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ತನ್ಮಧ್ಯೆ ಘಾಝಿಪುರವನ್ನು ತೆರವುಗೊಳಿಸುವಂತೆ ಉತ್ತರ ಪ್ರದೇಶ ಪೊಲೀಸರು ಪ್ರತಿಭಟನಾನಿರತ ರೈತರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.