ಕಾಟಿಪಳ್ಳದಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣ : ಮೂವರು ಸೆರೆ

Update: 2021-01-28 15:03 GMT

ಮಂಗಳೂರು, ಜ. 28: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಬುಧವಾರ ರಾತ್ರಿ ಬೈಕ್‌ನಲ್ಲಿ ಬಂದು ಯುವಕನಿಗೆ ಚೂರಿಯಿಂದ ಇರಿದು ಪರಾರಿಯಾದ ದುಷ್ಕರ್ಮಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣಾಪುರ ನಿವಾಸಿ ಜಾಬಿರ್ (20) ಚೂರಿ ಇರಿತಕ್ಕೆ ಒಳಗಾದವರು. ಬುಧವಾರ ರಾತ್ರಿ 10:45ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಜಾಬಿರ್ ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾಟಿಪಳ್ಳ 7ನೇ ಬ್ಲಾಕ್‌ನಲ್ಲಿ ದುಷ್ಕರ್ಮಿಗಳು ವಾಹನವನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಇರಿದಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಜಾಬಿರ್ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಘಟನೆಗೆ ಸಂಬಂಧಿಸಿ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಗುರುವಾರವೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಶ್ರೀನಿವಾಸ (20), ರಾಜು (20) ಮತ್ತು ಅಭಿಷೇಕ್ (18) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಲ್ಲಿ ಕಾಟಿಪಳ್ಳ 1ನೇ ಬ್ಲಾಕ್ ನಿವಾಸಿ ಶ್ರೀನಿವಾಸ್ ವಿರುದ್ಧ ಈಗಾಗಲೇ 3 ಪ್ರಕರಣ, ರಾಜು ವಿರುದ್ಧ 2 ಪ್ರಕರಣ ದಾಖಲಾಗಿವೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಆಯುಧವನ್ನು ವಶಪಡಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಚೂರಿ ಇರಿತ ಘಟನೆಗೆ ಸಂಬಂಧಿಸಿ ನೈಜ ಆರೋಪಿಗಳನ್ನು ಬಂಧಿಸುವಂತೆ ಪಾಪ್ಯುಲರ್ ಫ್ರಂಟ್ ಸಂಘಟನೆಯು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ, ಸಂಘಪರಿವಾರ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ದಾರಿತಪ್ಪುತ್ತಿರುವ ಯುವಕರಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಆದ್ದರಿಂದ ಆರೋಪಿಗಳನ್ನು ಬಂಧಿಸುವ ಜೊತೆಗೆ ಸಂಘಪರಿವಾರ ನಾಯಕರ ಮೇಲೆಯೂ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪಿಎಫ್‌ಐ ನಗರ ಅಧ್ಯಕ್ಷ ಅಬ್ದುಲ್ ಖಾದರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News