ದಿಲ್ಲಿ ಪ್ರತಿಭಟನೆ: ಗುಂಡೇಟಿನಿಂದಲ್ಲ, ಟ್ರ್ಯಾಕ್ಟರ್‌ನಡಿಗೆ ಸಿಲುಕಿ ಸಾವು ಸಂಭವಿಸಿದೆ

Update: 2021-01-28 15:08 GMT

ಹೊಸದಿಲ್ಲಿ,ಜ.28: ಗಣತಂತ್ರ ದಿನದಂದು ದಿಲ್ಲಿಯ ಐಟಿಒ ಬಳಿ ಸಂಭವಿಸಿದ್ದ ರೈತನ ಸಾವಿಗೆ ಗುಂಡೇಟು ಕಾರಣವಲ್ಲ, ತಲೆಯ ಎಡಭಾಗದಲ್ಲಿ ತೀವ್ರ ಗಾಯಗಳಾಗಿದ್ದು ಮಿದುಳು ಹೊರಬಂದು ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯು ಬಹಿರಂಗಗೊಳಿಸಿದೆ.

ಮೃತ ರೈತನ ಶರೀರದಲ್ಲಿ ಗುಂಡೇಟಿನ ಗಾಯಗಳಿರಲಿಲ್ಲ. ಎಕ್ಸ್‌ರೇದಲ್ಲಿ ಕೂಡ ಶರೀರದಲ್ಲಿ ಗುಂಡು ಇರುವುದು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ರಾಮಪುರ ನಿವಾಸಿ ನವನೀತ ಸಿಂಗ್ (27) ದೇಹದಲ್ಲಿ ಬಲಹುಬ್ಬು, ಗದ್ದ, ಎದೆಯ ಬಲಭಾಗ, ಮತ್ತು ತಲೆಬುರುಡೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಗಾಯಗಳಾಗಿದ್ದು,ತಲೆಗೆ ಆಗಿದ್ದ ಗಾಯದಿಂದ ಆಘಾತ ಮತ್ತು ಮಿದುಳಿನ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

 ತಲೆಗೆ ಆಗಿದ್ದ ಗಾಯ ಸಿಂಗ್ ಸಾವಿಗೆ ಕಾರಣವಾಗಿತ್ತು ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆತ ಚಲಾಯಿಸುತ್ತಿದ್ದ ಟ್ರಾಕ್ಟರ್ ಮಗುಚಿಬಿದ್ದಾಗ ತಲೆಯು ಅದರಡಿಗೆ ಸಿಲುಕಿರುವ ಸಾಧ್ಯತೆಯಿದೆ. ಆತನ ಶರೀರದಲ್ಲಿದ್ದ ಇತರ ಗಾಯಗಳೂ ಟ್ಯಾಕ್ಟರ್‌ನಡಿಗೆ ಬಿದ್ದಾಗ ಉಂಟಾಗಿದ್ದವು ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ವೈದ್ಯರ ತಂಡವೊಂದು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು,ಇಡೀ ಪ್ರಕ್ರಿಯೆಯನ್ನು ವೀಡಿಯೊ ಚಿತ್ರೀಕರಿಸಲಾಗಿದೆ ಎಂದರು.

ರೈತರ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಿಂಗ್ ದೀನದಯಾಳ ಉಪಾಧ್ಯಾಯ ಮಾರ್ಗದಲ್ಲಿ ತನ್ನ ಟ್ರಾಕ್ಟರ್ ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದಾಗ ಅದರಡಿಯಲ್ಲಿ ಸಿಲುಕಿ ಮೃತಪಟ್ಟಿದ್ದರು. ಗುಂಡೇಟಿನಿಂದ ಆತ ಮೃತಪಟ್ಟಿದ್ದಾನೆ ಎಂದು ಸ್ಥಳದಲ್ಲಿದ್ದ ಕೆಲವು ರೈತರು ಹೇಳಿದ್ದರೆ,ಅಶ್ರುವಾಯು ಶೆಲ್ ಸಿಂಗ್ ತಲೆಗೆ ಬಡಿದಿದ್ದರಿಂದ ಸಮತೋಲನ ಕಳೆದುಕೊಂಡು ಟ್ರಾಕ್ಟರ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿತ್ತು ಎಂದು ಇತರರು ತಿಳಿಸಿದ್ದರು. ಆದರೆ ಸಿಂಗ್ ಅತಿಯಾದ ವೇಗದಲ್ಲಿದ್ದ ಮತ್ತು ಟ್ರ್ಯಾಕ್ಟರ್ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News